ನ್ಯೂಸ್

ಚೀನಾದ ಕೋವಿಡ್​ ನಿರೋಧಕ ಮಂಗಗಳ ಮೇಲಿನ ಪ್ರಯೋಗ ಯಶಸ್ವಿ

vinaymk1969

ನವದೆಹಲಿ: ಜಾಗತಿಕವಾಗಿ ಕರೊನಾ ಸೋಂಕು ಹರಡಿ ಇಡೀ ವಿಶ್ವವೇ ಕೈತೊಳೆಯುವಂತೆ ಮಾಡಿರುವ ಚೀನಾ ಇದೀಗ ಕೋವಿಡ್​ 19 ನಿರೋಧಕ ಚುಚ್ಚುಮದ್ದನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ. ಈ ಚುಚ್ಚುಮದ್ದನ್ನು ಮಂಗಗಳ ಮೇಲೆ ಪ್ರಯೋಗಿಸಿದ್ದು, ಅದು ಯಶಸ್ವಿಯಾಗಿರುವುದಾಗಿ ತಿಳಿಸಿದೆ.

ವರದಿಗಳ ಪ್ರಕಾರ PiCoVacc ಎಂಬ ಇನ್​ಆಕ್ಟಿವೇಟೆಡ್​ ಕೋವಿಡ್​ 19 ನಿರೋಧಕ ಚುಚ್ಚುಮದ್ದನ್ನು ಬೀಜಿಂಗ್​ ಮೂಲದ ಸೈನಾವ್ಯಾಕ್​ ಬಯೋಟೆಕ್​ ಸಿದ್ಧಪಡಿಸಿದೆ. ಈ ರೋಗನಿರೋಧಕ ಚುಚ್ಚುಮದ್ದು ಪ್ರಾಯೋಗಿಕವಾಗಿ ಸಾಕಷ್ಟು ಭರವಸೆ ಮೂಡಿಸಿದೆ. ಭಾರತೀಯ ಮೂಲದ ಮಂಗಗಳಿಗೆ ಈ ಚುಚ್ಚುಮದ್ದನ್ನು ನೀಡಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಕಂಪನಿ ತಿಳಿಸಿದೆ.

ರೋಗನಿರೋಧಕ ಸಂಶೋಧಕರು ಮೊದಲಿಗೆ ಮಂಗಗಳಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡಿ, ಮೂರು ವಾರಗಳ ಬಳಿಕ ಅವನ್ನು ಕರೊನಾ ಸೋಂಕಿನ ವಾತಾವರಣದಲ್ಲಿ ಬಿಟ್ಟಿದ್ದರು. ಅವುಗಳಿಗೆ ನೀಡಲಾಗಿದ್ದ ರೋಗನಿರೋಧಕ ಚುಚ್ಚುಮದ್ದು ಕೋವಿಡ್​ 19 ವೈರಾಣು ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು (ಆ್ಯಂಟಿಬಾಡೀಸ್​) ದೇಹದಲ್ಲಿ ಉತ್ಪತ್ತಿ ಮಾಡಿತು. ಈ ಪ್ರತಿಕಾಯಗಳು ಸಾಮಾನ್ಯ ವೈರಾಣುಗಳ ವಿರುದ್ಧವೂ ಹೋರಾಡಬಲ್ಲವು ಎಂದು ಸೈನ್ಸ್​ ಮ್ಯಾಗಝೀನ್​ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಪ್ರಮಾಣದ PiCoVacc ಚುಚ್ಚುಮದ್ದು ನೀಡಿದ್ದ ಮಂಗಗಳ ಶ್ವಾಸಕೋಶದಲ್ಲಿ ಒಂದು ವಾರದ ಬಳಿಕ ಕೋವಿಡ್​ 19 ವೈರಾಣುಗಳು ಇರಲಿಲ್ಲ. ಆದರೆ, ಈ ಚುಚ್ಚಮದ್ದು ನೀಡದ ಮಂಗಗಳು ಸೋಂಕು ತಗುಲಿಸಿಕೊಂಡು, ತೀವ್ರ ಸ್ವರೂಪದ ನ್ಯುಮೋನಿಯಾಕ್ಕೆ ತುತ್ತಾದವು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಒಂದು ಮೂಲದ ಪ್ರಕಾರ ಚೀನಾದಲ್ಲಿ ಈ ರೋಗನಿರೋಧಕ ಚುಚ್ಚುಮದ್ದನ್ನು ಏಪ್ರಿಲ್​ ಮಧ್ಯದಿಂದಲೇ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ. ಇದರ ಜತೆಗೆ ಚೀನಾದ ಸೇನಾಪಡೆ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದೆ ಎನ್ನಲಾದ ರೋಗನಿರೋಧಕ ಚುಚ್ಚುಮದ್ದನ್ನು ಕೂಡ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ ಎಂದು ಹೇಳಲಾಗಿದೆ.