ನವದೆಹಲಿ: ಗಲ್ವಾನ್ ನದಿ ಮತ್ತು ಶಿಯೋಕ್ ನದಿಯ ಸಂಗಮ ಸ್ಥಳದ ವೈ ಜಂಕ್ಷನ್ನ ಗಸ್ತು ಪಾಯಿಂಟ್ 14ರಲ್ಲಿ ಜೂ.15ರಂದು ನಡೆದಿದ್ದ ರಕ್ತಸಿಕ್ತ ಘರ್ಷಣೆಯ ಬಳಿಕ ಚೀನಾ ಭಾರತದ ಒಟ್ಟು 60 ಯೋಧರನ್ನು ಹಿಡಿದಿಟ್ಟುಕೊಂಡಿತ್ತು. ಆದರೆ, 24 ತಾಸುಗಳ ಬಳಿಕ 50 ಯೋಧರನ್ನು ಬಿಟ್ಟುಕಳುಹಿಸಿ, ಉಳಿದ 10 ಯೋಧರ ಬಿಡುಗಡೆಯನ್ನು ಬೇಕೆಂದೇ ವಿಳಂಬಿಸಿತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ರಾತ್ರಿ ವೇಳೆ ನಡೆದ ಘರ್ಷಣೆಯ ಬಳಿಕ ಮರುದಿನ ಬೆಳಗ್ಗೆ ತಮ್ಮ ತಮ್ಮ ಪರಿಧಿಯಲ್ಲಿ ಗಾಯಗೊಂಡು ಬಿದ್ದಿದ್ದ ಯೋಧರನ್ನು ಪತ್ತೆ ಮಾಡುವ ಕಾರ್ಯವನ್ನು ಭಾರತ ಮತ್ತು ಚೀನಾ ಆರಂಭಿಸಿದ್ದವು. ಭಾರತೀಯ ನೆಲದ ಮೇಲೆ ಪತ್ತೆಯಾದ 12ಕ್ಕೂ ಹೆಚ್ಚು ಯೋಧರನ್ನು ಭಾರತ ತಡಮಾಡದೆ ವಾಪಸು ಕಳುಹಿಸಿತ್ತು. ಹಾಗೆ ಬಿಡುಗಡೆ ಮಾಡಿದ ಚೀನಾ ಯೋಧರ ಪೈಕಿ ಕರ್ನಲ್ ಶ್ರೇಣಿಯ ಅಧಿಕಾರಿಯೂ ಇದ್ದರು.
ಆದರೆ, ತನ್ನ ಭಾಗದ ಭೂಮಿಯ ಮೇಲೆ 60 ಯೋಧರು ಇದ್ದು, ಅವರೆಲ್ಲರನ್ನೂ ವಶಕ್ಕೆ ಪಡೆದು ಸುರಕ್ಷಿತವಾಗಿ ಇರಿಸಿಕೊಂಡಿರುವುದಾಗಿ ಚೀನಾ ಹೇಳಿತ್ತು. ಸಾಕಷ್ಟು ಸಂಧಾನ ಮಾತುಕತೆಗಳು ನಡೆದ ಬಳಿಕ ಅಂದರೆ 24 ಗಂಟೆಗಳ ಬಳಿಕ ಭಾರತದ 50 ಯೋಧರನ್ನು ಬಿಟ್ಟುಕಳುಹಿಸಿತ್ತು.
ಕೆಲವರಿಗೆ ಗಂಭೀರ ಗಾಯಗಳಾಗಿದ್ದವು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅವರೆಲ್ಲರನ್ನೂ ಚೀನಾ ಬಿಡುಗಡೆ ಮಾಡಿದ ಬಳಿಕ ಮಿಲಟರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು ಎಂದು ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ.
ಬಿಡುಗಡೆ ಮಾಡದೆ ತನ್ನ ಬಳಿ ಇರಿಸಿಕೊಂಡಿದ್ದ ಭಾರತದ ನಾಲ್ವರು ಅಧಿಕಾರಿಗಳು ಸೇರಿ 10 ಯೋಧರ ಬಿಡುಗಡೆಗೆ ಅದು ನಿರಾಕರಿಸಿತು. ಕೆಲವೊಂದು ನೀತಿನಿಯಮಗಳನ್ನು ಪೂರೈಸಿದ ಬಳಿಕ ಅವರನ್ನು ಬಿಟ್ಟು ಕಳುಹಿಸುವುದಾಗಿ ಹೇಳುತ್ತಾ ಸತಾಯಿಸಲಾರಂಭಿಸಿತು. ಅದೆಷ್ಟೇ ಸುತ್ತಿನ ಸಂಧಾನ ಮಾತುಕತೆಗಳನ್ನು ನಡೆಸಿದರೂ, ಅವರೆಲ್ಲರೂ ಸುರಕ್ಷಿತವಾಗಿದ್ದು, ನಿಯಮ ಪೂರೈಸಿದ ಬಳಿಕ ಬಿಟ್ಟುಕಳುಹಿಸುವುದಾಗಿ ಹೇಳುತ್ತಾ ಮಾನಸಿಕ ಒತ್ತಡ ಹೇರಲಾರಂಭಿಸಿತು.
ಬಳಿಕ ಮೂರು ದಿನ ನಡೆದ ಸರಣಿ ಸಂಧಾನದ ಸಭೆಯ ಬಳಿಕ ಚೀನಾ ನಾಲ್ವರು ಅಧಿಕಾರಿಗಳು ಸಹಿತ ಭಾರತದ 10 ಯೋಧರನ್ನು ಬಿಟ್ಟುಕಳುಹಿಸಿತು. ಇವರೆಲ್ಲರನ್ನೂ ಬಿಟ್ಟುಕಳುಹಿಸಿದ ನಂತರದಲ್ಲಿ ಲಡಾಖ್ ಪ್ರದೇಶದಲ್ಲಿ ಜಮಾವಣೆಗೊಂಡಿದ್ದ ಸೇನಾಪಡೆಯನ್ನು ಹಿಂಪಡೆಯುವ ಕುರಿತು ಭಾರತ ಮತ್ತು ಚೀನಾ ನಡುವಿನ ಮಾತುಕತೆ ಸರಾಗವಾಗಿ ಮುಂದುವರಿಯಿತು ಎನ್ನಲಾಗಿದೆ.