ನ್ಯೂಸ್

ಇದೇ ಮೊದಲ ಬಾರಿಗೆ ಪಹಲ್ಗಾಮ್​ ದಾಳಿಯನ್ನು ಖಂಡಿಸಿದ ಚೀನಾ! ಹೇಳಿದ್ದೇನು? | Lin Jian

Lin Jian: ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಸ್ಥೆಯನ್ನು ಅಮೆರಿಕ ಭಯೋತ್ಪಾದಕ ಸಂಸ್ಥೆ ಎಂದು ಗೊತ್ತುಪಡಿಸಿದ ನಂತರ ಇದೀಗ ಚೀನಾ, ಏಪ್ರಿಲ್​ 22 ರಂದು ನಡೆದ ಪಹಲ್ಗಾಮ್​ ದಾಳಿ(Pahalgam attack)ಯನ್ನು ಖಂಡಿಸಿದೆ.

ಭಯೋತ್ಪಾದನೆಯನ್ನು ಎದುರಿಸಲು ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪ್ರಾದೇಶಿಕ ಸಹಕಾರಕ್ಕೆ ಕರೆ ನೀಡಿದೆ. ಭಯೋತ್ಪಾದನೆ ದಮನಕ್ಕೆ ಅಮೆರಿಕದ ಪ್ರಯತ್ನವನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್(Lin Jian) ಶ್ಲಾಘಿಸಿದ್ದಾರೆ.

ಚೀನಾವು ಎಲ್ಲ ರೀತಿಯ ಭಯೋತ್ಪಾದನೆಯನ್ನು ದೃಢವಾಗಿ ವಿರೋಧಿಸುತ್ತದೆ ಮತ್ತು ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ಭದ್ರತೆಯನ್ನು ಹಾಗೂ ಸ್ಥಿರತೆಯನ್ನು ಜಂಟಿಯಾಗಿ ಕಾಪಾಡಿಕೊಳ್ಳಲು ಚೀನಾ ಪ್ರಾದೇಶಿಕ ದೇಶಗಳಿಗೆ ಕರೆ ನೀಡುತ್ತದೆ ಎಂದು ಲಿನ್​ ಜಿಯಾನ್​ ಹೇಳಿದ್ದಾರೆ.

ಅಮೆರಿಕ ಹೇಳಿದ್ದೇನು?

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗುರುವಾರ (ಜುಲೈ 17) ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇಂದು ವಿದೇಶಾಂಗ ಇಲಾಖೆಯು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಸ್ಥೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಎಂಬ ಪಟ್ಟಿಗೆ ಸೇರಿಸುತ್ತಿದೆ ಎಂದು ಹೇಳಿದರು.

2008ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದರೆ ಅದು ಪಹಲ್ಗಾಮ್ ದಾಳಿ ಎಂದು ಇದೇ ಸಂದರ್ಭದಲ್ಲಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ಅಮೆರಿಕದ ವಿದೇಶಾಂಗ ಇಲಾಖೆ ತೆಗೆದುಕೊಂಡ ಈ ಕ್ರಮಗಳು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು, ಭಯೋತ್ಪಾದನೆಯನ್ನು ಎದುರಿಸಲು ಮತ್ತು ಪಹಲ್ಗಾಮ್ ದಾಳಿಗೆ ನ್ಯಾಯಕ್ಕಾಗಿ ಅಧ್ಯಕ್ಷ ಟ್ರಂಪ್ ಅವರ ಕರೆಯನ್ನು ತಕ್ಷಣವೇ ಜಾರಿಗೊಳಿಸಲು ಟ್ರಂಪ್ ಆಡಳಿತದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್ 219 ಮತ್ತು ಕಾರ್ಯನಿರ್ವಾಹಕ ಆದೇಶ 13224ರ ಅಡಿಯಲ್ಲಿ, ಟಿಆರ್‌ಎಫ್ ಮತ್ತು ಅದರ ಸಂಬಂಧಿತ ಅಲಿಯಾಸ್‌ಗಳನ್ನು ಲಷ್ಕರ್-ಇ-ತೊಯ್ಬಾದ ಎಫ್‌ಟಿಒ ಮತ್ತು ಎಸ್‌ಡಿಜಿಟಿ ಎರಡರ ಪಟ್ಟಿಗೆ ಅಧಿಕೃತವಾಗಿ ಸೇರಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ರೂಬಿಯೊ ಹೇಳಿದರು. ಇದಕ್ಕೂ ಮುನ್ನ, ಪಹಲ್ಗಾಮ್​ ದಾಳಿ ಮತ್ತು ಆಪರೇಷನ್​ ಸಿಂಧೂರ ಬಗ್ಗೆ ಜಗತ್ತಿಗೆ ತಿಳಿಸಲು ಭಾರತದ ಸರ್ವಪಕ್ಷ ಸಂಸದೀಯ ನಿಯೋಗದ ಭೇಟಿಯ ಸಂದರ್ಭದಲ್ಲಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ಮತ್ತು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಗೆ ಅಮೆರಿಕ ತನ್ನ ಬಲವಾದ ಬೆಂಬಲವನ್ನು ಸೂಚಿಸಿತು. ಇದರ ಬೆನ್ನಲ್ಲೇ ಅಮೆರಿಕ ಈ ಕ್ರಮ ತೆಗೆದುಕೊಂಡಿರುವುದು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಸಿಕ್ಕ ಗೆಲುವಾಗಿದೆ.