ಇತ್ತೀಚಿನ ದಿನಗಳಲ್ಲಿ ಚೀನಾದ ಅಧಿಕಾರಿಗಳು ಕನ್ಸಲ್ಟಿಂಗ್ ಸಂಸ್ಥೆ ಬೈನ್ ಕಂಪನಿಯ ಶಾಂಘೖ ಕಚೇರಿಯಲ್ಲಿನ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ಚಿಪ್ ತಯಾರಕ ಕಂಪನಿ ಮೈಕ್ರಾನ್ ಟೆಕ್ನಾಲಜಿಯ ಆಮದುಗಳ ಕುರಿತಂತೆ ಸೈಬರ್ ಸೆಕ್ಯುರಿಟಿ ಪರಿಶೀಲನೆ ಕೈಗೊಂಡಿದ್ದಾರೆ. ಜಪಾನಿನ ಔಷಧ ತಯಾರಕ ಕಂಪನಿ ಅಸ್ಟೆಲ್ಲಾಸ್ ಫಾರ್ವ ಇಂಕ್ನ ಉದ್ಯೋಗಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅಮೆರಿಕದ ಡ್ಯೂ-ಡಿಲಿಜೆನ್ಸ್ ಕಂಪನಿ ಮಿಂಟ್ಜ್ ಗ್ರೂಪ್ನ ಬೀಜಿಂಗ್ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಜಾಗತಿಕ ಹೂಡಿಕೆದಾರರು ವ್ಯಾಪಾರ ಕೈಗೊಳ್ಳಲು ಮುಕ್ತ ಸಂದೇಶ ಸಾರಿದ ಕೆಲ ತಿಂಗಳುಗಳಲ್ಲಿಯೇ ಚೀನಾದ ಅಧಿಕಾರಿಗಳು ವಿದೇಶಿ ವ್ಯವಹಾರಗಳಿಗೆ ಅಡಚಣೆ ಉಂಟು ಮಾಡತೊಡಗಿದ್ದಾರೆ.
ಬೇಹುಗಾರಿಕೆಯ ಶಂಕಿತರ ಸಾಮಾನು ಸರಂಜಾಮು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ತಪಾಸಣೆಗೆ ಅವಕಾಶ ನೀಡುವುದು ಸೇರಿದಂತೆ ವಿದೇಶಿ ಬೆದರಿಕೆ ಸಾಧ್ಯತೆಗಳನ್ನು ಎದುರಿಸಲು ಸರ್ಕಾರವು ಬೇಹುಗಾರಿಕೆ ಕಾನೂನನ್ನು ವಿಸ್ತರಿಸಿದೆ. ಈ ಮೂಲಕ ಚೀನಾದಲ್ಲಿರುವ ಪಾಶ್ಚಿಮಾತ್ಯ ಕಂಪನಿಗಳಿಗೆ ಅಪಾಯಗಳು ಗಣನೀಯವಾಗಿ ಹೆಚ್ಚುವಂತಾಗಿದೆ.
ನಿಯಂತ್ರಣದ ಬಯಕೆ: ಮೂರನೇ ಅವಧಿಗೆ ಚೀನಾದ ನಾಯ ಕನಾಗಿ ಹೊರಹೊಮ್ಮಿರುವ ಷಿ ಜಿನ್ಪಿಂಗ್, ದೇಶದ ಖಾಸಗಿ ವಲಯವನ್ನು ನಿಯಂತ್ರಿಸುವ ಅಭಿಯಾನ ಆರಂಭಿಸಿದ್ದಾರೆ. ಚೀನಾವು ಅಮೆರಿಕದೊಂದಿಗೆ ಹೆಚ್ಚಿನ ಸ್ಪರ್ಧೆಗೆ ಸಜ್ಜಾಗುತ್ತಿದ್ದಂತೆ, ಕಮ್ಯುನಿಸ್ಟ್ ಸರ್ಕಾರ ಅಮೆರಿಕ ಮತ್ತು ಇತರ ವಿದೇಶಿ ಕಂಪನಿಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಮುಂದಾಗಿದೆ.
ಚೀನಾದ ಆಡಳಿತ ಮತ್ತು ಅಭಿವೃದ್ಧಿಯ ಬಗ್ಗೆ ಹೊರಜಗತ್ತಿಗೆ ಮಾಹಿತಿ ಹೋಗುವುದನ್ನು ನಿಯಂತ್ರಿಸುವ ಬಯಕೆ ಸರ್ಕಾರದ್ದಾಗಿದೆ. ಲೆಕ್ಕಪರಿಶೋಧಕರು, ನಿರ್ವಹಣಾ ಸಲಹೆಗಾರರು ಮತ್ತು ಕಾನೂನು ಸಂಸ್ಥೆಗಳ ಮೂಲಕ ವಿದೇಶಿ ಕಂಪನಿಗಳು ಸಂಗ್ರಹಿಸಿದ ಮಾಹಿತಿಯನ್ನು ನಿಯಂತ್ರಿಸುವ ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ. ಚೀನಾದಲ್ಲಿನ ಅಪಾಯಗಳನ್ನು ನಿರ್ಣಯಿಸುವ ನಿಟ್ಟಿನಲ್ಲಿ ವಿಶ್ವಾಸಾರ್ಹ ಮಾಹಿತಿ ಸೇವೆಯನ್ನು ಅವಲಂಬಿಸಿರುವ ಪಾಶ್ಚಿಮಾತ್ಯ ವ್ಯಾಪಾರ ಸಮುದಾಯವನ್ನು ಇದು ಚಿಂತೆಗೀಡು ಮಾಡಿದೆ.
ವ್ಯಾಪಾರ ಸಮುದಾಯಕ್ಕೆ ಮಾಹಿತಿಯ ಅಗತ್ಯವಿದೆ. ಆದರೆ, ಬೇಹುಗಾರಿಕೆ ಏಜೆಂಟ್ ಎಂದು ಬ್ರಾ್ಯಂಡ್ ಆಗುವ ಭಯದಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಲು ಸಾಧ್ಯವಾಗದ ಅಪಾಯ ತಲೆದೋರಿದೆ ಎಂದು ಚೀನಾದಲ್ಲಿನ ಅಮೆರಿಕದ ಚೇಂಬರ್ ಆಫ್ ಕಾಮರ್ಸ್ನ ನೀತಿ ಸಮಿತಿ ಅಧ್ಯಕ್ಷ ಲೆಸ್ಟರ್ ರಾಸ್ ಹೇಳುತ್ತಾರೆ. ಚೀನಾದಲ್ಲಿ ವಿದೇಶಿ ಕಂಪನಿಗಳಿಗೆ ತೊಂದರೆಯಾಗುತ್ತಿರುವ ಬಗೆಗೆ ಅಮೆರಿಕದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ‘ಅಮೆರಿಕದ ಬೈನ್ ಮತ್ತು ಮಿಂಟ್ಜ್ ಕಂಪನಿಗಳ ಮೇಲೆ ಚೀನಾದಲ್ಲಿ ಇತ್ತೀಚಿನ ಪೊಲೀಸ್ ದಾಳಿಗಳನ್ನು ಗುರುತಿಸಬೇಕು. ಇವು ಶೋಷಣೆಯ ಭಾಗವಾಗಿವೆ’ ಎಂದು ಚೀನೀ ಕಮ್ಯುನಿಸ್ಟ್ ಪಕ್ಷದ ಕುರಿತಂತೆ ಅಮೆರಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ವಿಸ್ಕಾನ್ಸಿನ್ನ ರಿಪಬ್ಲಿಕನ್ ಪ್ರತಿನಿಧಿ ಮೈಕ್ ಗಲ್ಲಾಘರ್ ಹೇಳಿದ್ದಾರೆ.
ವಾಷಿಂಗ್ಟನ್ನಲ್ಲಿರುವ ಚೀನೀ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು, ‘ವಿದೇಶಿ ವ್ಯವಹಾರಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ವಿದೇಶಿ ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಚೀನಾ ಬದ್ಧವಾಗಿದೆ. ಚೀನೀ ಕಾನೂನುಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿರುವ ಎಲ್ಲಾ ವಿದೇಶಿ ಕಂಪನಿಗಳು ಕಾರ್ಯಾಚರಣೆಯಲ್ಲಿ ಸಂಪೂರ್ಣ ವ್ಯಾಪಾರ ಸ್ವಾಯತ್ತತೆ ಹೊಂದಿರುತ್ತವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಚೀನಾಕ್ಕೆ ನಷ್ಟ ಅಲ್ಲವೆ?: ವಿದೇಶಿ ಕಂಪನಿಗಳನ್ನುಹೊರಗೆ ತಳ್ಳುವ ಉದ್ದೇಶವನ್ನು ಚೀನಾ ಹೊಂದಿಲ್ಲ; ಚೀನಾದಲ್ಲಿ ಉತ್ಪಾದನೆ ವಿಸ್ತರಿಸಲು ಪೋ›ತ್ಸಾಹಿಸಲಾಗುತ್ತಿದೆ. ಚೀನಾದ ಮಾರುಕಟ್ಟೆಗೆ ಪ್ರವೇಶಕ್ಕೆ ಅವಕಾಶ ನೀಡಿರುವುದಕ್ಕೆ ಪ್ರತಿಯಾಗಿ ವಿದೇಶಿ ಕಂಪನಿಗಳು, ಚೀನಾದ ಅಭಿವೃದ್ಧಿಗೆ ನೆರವಾಗುವ ಉತ್ತಮ ಕೆಲಸವನ್ನು ಮಾಡಬೇಕು. ಎಲ್ಲಾ ಕಂಪನಿಗಳನ್ನು ಅನುಮಾನ ದಿಂದ ನೋಡುವುದಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳುತ್ತಾರೆ. ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಲ್ಲಿ ಮಾರಾಟ ಮಾಡುವ ಮತ್ತು ಉತ್ಪಾದಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಂಬಿದ್ದಾರೆ. ಆದರೆ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳ ಕಾರಣದಿಂದಾಗಿ ವಿದೇಶಿ ಹೂಡಿಕೆದಾರರು ಮತ್ತು ವ್ಯವಹಾರಗಳು ದೂರಹೋಗಬಹುದು ಎಂದು ಕೆಲವು ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವಿಲೀನ ವಿಳಂಬ: ಅಮೆರಿಕ ಕಂಪನಿಗಳ ಮೇಲೆ ಒತ್ತಡ ಹೇರುವ ಪ್ರಯತ್ನದ ಭಾಗವಾಗಿ ಚೀನಾದ ನಿಯಂತ್ರಕರು ಹಲವಾರು ಪ್ರಸ್ತಾವಿತ ಸ್ವಾಧೀನ ಮತ್ತು ವಿಲೀನದ ಪ್ರಕ್ರಿಯೆಗಳನ್ನು ನಿಧಾನಗೊಳಿಸಿದ್ದಾರೆ. ಇಸ್ರೇಲ್ ಮೂಲದ ಟವರ್ ಸೆಮಿಕಂಡಕ್ಟರ್ ಲಿಮಿಟೆಡ್ ಅನ್ನು ಇಂಟೆಲ್ ಕಾರ್ಪ್ 5.2 ಶತಕೋಟಿ ಡಾಲರ್ಗೆ ಸ್ವಾಧೀನಪಡಿಸಿಕೊಳ್ಳುವ ಹಾಗೂ ತೈವಾನ್ನ ಸಿಲಿಕಾನ್ ಮೋಷನ್ ಟೆಕ್ನಾಲಜಿ ಸಂಸ್ಥೆಯನ್ನು ಮ್ಯಾಕ್ಸ್ಲಿನಿಯರ್ಇಂಕ್ ಎಂಬ ಚಿಪ್ ತಯಾರಕ ಕಂಪನಿಯು 3.8 ಶತಕೋಟಿ ಡಾಲರ್ ವೆಚ್ಚದಲ್ಲಿ ಖರೀದಿ ಮಾಡುವ ಪ್ರಕ್ರಿಯೆಗಳಿಗೆ ಅನುಮತಿ ನೀಡುವಲ್ಲಿ ಚೀನಾ ವಿಳಂಬ ನೀತಿ ಅನುಸರಿಸುತ್ತಿದೆ.
ಚಿಪ್ ಚಿತಾವಣೆ: ವಿದೇಶಿ ಬಂಡವಾಳವು ಚೀನಾದ ಆರ್ಥಿಕ ಪ್ರಗತಿಗೆ ಮುಖ್ಯವಾಗಿದ್ದರೂ, ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಚೀನಾದ ನಾಯಕತ್ವದೊಳಗೆ ವ್ಯಕ್ತವಾಗುತ್ತಿದೆ ಎಂದು ಪರಿಣತರು ಹೇಳುತ್ತಾರೆ. ಕಳೆದ ಅಕ್ಟೋಬರ್ನಲ್ಲಿ ಅಮೆರಿಕವು ಚೀನಾಕ್ಕೆ ಉನ್ನತ-ಮಟ್ಟದ ಚಿಪ್ ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನ ಮಾರಾಟದ ಮೇಲೆ ನಿಷೇಧ ಜಾರಿಗೊಳಿಸಿದಾಗಿನಿಂದ ಇಂತಹ ದೃಷ್ಟಿಕೋನ ಅಧಿಕಗೊಂಡಿದೆ. ಅಮೆರಿಕದ ಇಂತಹ ನಿಷೇಧ ಕ್ರಮದ ಹಿಂದೆ ಮೈಕ್ರಾನ್ನಂತಹ ಕೆಲವು ಕಂಪನಿಗಳು ಇವೆ ಎಂದು ಚೀನಾದ ಅಧಿಕಾರಿಗಳು ನಂಬಿದ್ದಾರೆ.
ಅಮೆರಿಕದ ಕಂಪನಿಗಳಲ್ಲಿ ಭಯದ ವಾತಾವರಣ ಸೃಷ್ಟಿಸುವುದು ಚೀನಾದ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಹೀಗಾದರೆ, ಚೀನಾ ಅಪಾಯಕಾರಿ ಮಾರುಕಟ್ಟೆ ಎಂದು ತೀರ್ಮಾನಿಸಿ ಈ ಕಂಪನಿಗಳು ಅಲ್ಲಿಂದ ತೊರೆಯಲು ಆರಂಭಿಸುತ್ತವೆ. | ಆರ್ಥರ್ ಕ್ರೋಬರ್, ಆರ್ಥಿಕ ಸಲಹಾ ಸಂಸ್ಥೆ ಗವೆಕಲ್ ಡ್ರಾಗನೊಮಿಕ್ಸ್ನ ಸಂಸ್ಥಾಪಕ ಪಾಲುದಾರ
2024ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿರುವ ಭಾರತೀಯ ಮೂಲದ ಅಮೆರಿಕ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ತಾವು ಚುನಾವಣೆಯಲ್ಲಿ ಆಯ್ಕೆಯಾದರೆ ಚೀನಾದೊಂದಿಗೆ ಅಮೆರಿಕ ಕಂಪನಿಗಳು ವ್ಯಾಪಾರ ಮಾಡುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಚೀನೀ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಪತನಗೊಳ್ಳುವವರೆಗೆ ಅಥವಾ ಸಿಸಿಪಿ ಬದಲಾಗುವವರೆಗೆ ಚೀನಾದ ಜತೆ ವ್ಯಾಪಾರ ಮಾಡುವುದನ್ನು ನಿಷೇಧಿಸಲು ಸಿದ್ಧ ಎಂದು ಹೇಳಿದ್ದಾರೆ.
ಭಾರತಕ್ಕೆ ಲಾಭ: ಅಮೆರಿಕ ಹಾಗೂ ಚೀನಾ ನಡುವಿನ ವೈಮನಸ್ಸಿನ ಲಾಭವು ಭಾರತಕ್ಕೆ ದೊರೆಯಲಾರಂಭಿಸಿದೆ. ಚೀನಾದ ಬದಲು ಭಾರತದಲ್ಲಿ ಹೂಡಿಕೆ ಮಾಡಲು ಹಾಗೂ ಉತ್ಪಾದನೆ ಕೈಗೊಳ್ಳಲು ಅಮೆರಿಕದ ಅನೇಕ ಕಂಪನಿಗಳು ಆದ್ಯತೆ ನೀಡುತ್ತಿವೆ. ಆಪಲ್ ಕಂಪನಿಯು ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಂಡಿರುವುದು ಇದಕ್ಕೊಂದು ಉದಾಹರಣೆ.