ನ್ಯೂಸ್

'ಆಪರೇಷನ್ ಸಿಂಧೂರ' ವೇಳೆ ಪಾಕ್​ಗೆ ಚೀನಾ ಕದ್ದುಮುಚ್ಚಿ ಸಹಾಯ!? ಕಡೆಗೂ ಉತ್ತರಿಸಿದ ಚೀನಾ ಮಿಲಿಟರಿ | China

China: ಇಂದು (ಮೇ.12) ದೆಹಲಿಯಲ್ಲಿ ಭಾರತದ ಮೂರು ಸೇನಾ ಅಧಿಕಾರಿಗಳು ಪಾಕಿಸ್ತಾನ ವಿರುದ್ಧ ನಡೆಸಿದ ‘ಆಪರೇಷನ್ ಸಿಂಧೂರ’ ಬಗ್ಗೆ ಹಲವಾರು ರೋಚಕ ಸಂಗತಿಗಳನ್ನು ವಿಸ್ತೃತವಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು. ಕದನ ವಿರಾಮ ಬಳಿಕ ಪಾಕ್ ಮತ್ತೆ ತನ್ನ​ ನರಿ ಬುದ್ಧಿ ಪ್ರದರ್ಶಿಸಲು ಮುಂದಾದರೆ ಯುದ್ಧಕ್ಕಿಂತ ಕಠಿಣ ಸಂದರ್ಭಗಳನ್ನು ಎದುರಿಸಲು ತಯಾರಾಗಿ ಎಂದು ಭಾರತೀಯ ಸೇನೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಇದರ ಬೆನ್ನಲ್ಲೇ ಚೀನಾ ಮೇಲಿನ ಆರೋಪವೊಂದು ಇದೀಗ ಭಾರೀ ವಿವಾದಕ್ಕೆ ಗುರಿಯಾಗಿದೆ.

ಕಳೆದ ವಾರ ಭಾರತದ ವಿರುದ್ಧದ ಕ್ಷಿಪಣಿ ಮತ್ತು ಡ್ರೋನ್​ಗಳ ದಾಳಿ ಸಮಯದಲ್ಲಿ ಪಾಕಿಸ್ತಾನಕ್ಕೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ ಎಂಬ ಆರೋಪಗಳು ವ್ಯಕ್ತವಾಗಿವೆ. ತನ್ನ ಅತಿದೊಡ್ಡ ಮಿಲಿಟರಿ ಸರಕು ವಿಮಾನವನ್ನು ಪಾಕ್​ಗೆ ಕಳುಹಿಸಿಕೊಡುವ ಮೂಲಕ ಚೀನಾ ತನ್ನ ಆಪ್ತತೆ ತೋರಿದ ಎಂಬ ಗಂಭೀರ ಆರೋಪಕ್ಕೆ ಸ್ವತಃ ಚೀನಾ ಸೇನೆ ಇದೀಗ ಸ್ಪಷ್ಟನೆ ನೀಡಿದೆ.

ಆರೋಪಗಳಿಗೆ ಕಡೆಗೂ ಪ್ರತಿಕ್ರಿಯಿಸಿರುವ ಪೀಪಲ್ಸ್ ಲಿಬರೇಶನ್ ಆರ್ಮಿ ವಾಯುಪಡೆಯು, ಇದೆಲ್ಲವೂ ಶುದ್ಧ ಸುಳ್ಳು. ಕೇವಲ ವದಂತಿ ಅಷ್ಟೇ ಎಂದು ಕರೆದಿದೆ. ಇಂತಹ ಸುಳ್ಳು ಆರೋಪಗಳನ್ನು ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಖಡಕ್ ಎಚ್ಚರಿಕೆ ರವಾನಿಸಿದೆ. ಚೀನಾದ ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಹೇಳಿಕೆ ಪ್ರಕಾರ, ಚೀನಾ Y-20 ಮೂಲಕ ಪಾಕಿಸ್ತಾನಕ್ಕೆ ಪರಿಹಾರ ವಸ್ತುಗಳನ್ನು ಕಳಿಸಿಕೊಟ್ಟಿದೆ ಎಂಬ ವಿಚಾರ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಸಲಿಗೆ ನಮ್ಮ ವಾಯುಪಡೆ ಅಂತಹ ಯಾವುದೇ ಕಾರ್ಯಾಚರಣೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

'ಆಪರೇಷನ್ ಸಿಂಧೂರ' ಸಮಯದಲ್ಲಿ ಭಾರತ ಎದುರು ಸೆಣಸಾಡಲು ಚೀನಾದ ಫೈಟರ್ ಜೆಟ್‌ಗಳನ್ನು ನಾವು ಬಳಸಿಕೊಂಡಿದ್ದೇವೆ ಎಂಬ ಪಾಕ್​ ಹೇಳಿಕೆಗಳನ್ನು ತಳ್ಳಿಹಾಕಿರುವ ಚೀನಾ, ನಮ್ಮ ದೇಶ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಶಾಂತಿ ಮತ್ತು ಸ್ಥಿರತೆಯ ದೊಡ್ಡ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಇನ್ನಷ್ಟು ಜಟಿಲಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳದಂತೆ ನಾವು ಎರಡೂ ದೇಶಗಳಿಗೂ ಒತ್ತಾಯಿಸುತ್ತೇವೆ" ಎಂದು ಚೀನಾ ತಿಳಿಸಿದೆ,(ಏಜೆನ್ಸೀಸ್).