ಬೀಜಿಂಗ್: ಕರೊನಾ ವೈರಾಣುವಿನ ಮೂಲವನ್ನು ಬೇಕಾದರೆ ಹುಡುಕಿಕೊಳ್ಳಿ. ಇದಕ್ಕೆ ನಮ್ಮ ಅಡ್ಡಿಯೇನೂ ಇಲ್ಲ ಎಂದು ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ಹೇಳಿದೆ.
ಚೀನಾದ ವುಹಾನ್ ಕರೊನಾ ವೈರಾಣುವಿನ ಉಗಮ ಸ್ಥಾನ. ಕಳೆದ ವರ್ಷದ ನವೆಂಬರ್ನಿಂದ ಇಲ್ಲಿಂದಲೇ ಕೋವಿಡ್-19 ಸೋಂಕು ವಿಶ್ವವ್ಯಾಪಿಯಾಯಿತು ಎಂಬ ಅನುಮಾನವನ್ನು ಪರಿಹರಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯ ನಿಯೋಗವೊಂದು ಚೀನಾಕ್ಕೆ ಭೇಟಿ ನೀಡಲು ಉದ್ದೇಶಿಸಿದೆ. ತನಿಖೆಗಾಗಿ ಆಗಮಿಸುವ ಈ ನಿಯೋಗಕ್ಕೆ ಮುಕ್ತಪ್ರವೇಶ ನೀಡುವುದಾಗಿ ಚೀನಾ ಬುಧವಾರ ಹೇಳಿದೆ.
ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಹೋಗುವ ಅಮೆರಿಕದ ನಿರ್ಧಾರವನ್ನು ಚೀನಾ ಟೀಕಿಸಿದೆ. ಅಮೆರಿಕದ ಈ ನಿರ್ಧಾರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಲಿದೆ. ಅಷ್ಟೇ ಅಲ್ಲ, ಸಾಂಕ್ರಾಮಿಕ ರೋಗಗಳ ತಡೆಗೆ ಜಾಗತಿಕ ಪ್ರಯತ್ನಗಳನ್ನು ಅಪಮೌಲ್ಯಗೊಳಿಸಿದಂತಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.
ಜಾಗತಿಕ ಸಾರ್ವಜನಿಕ ಆರೋಗ್ಯ ಭದ್ರತೆ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೆಚ್ಚು ಅಧಿಕಾರಯುತವಾದ ಮತ್ತು ವೃತ್ತಿಪರವಾದ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.