Brutal Murder: ರಾಜಕೀಯದಲ್ಲಿ ಸಕ್ರಿಯವಾಗಿದ್ದ ಹೆಂಡತಿಯನ್ನು ಬರ್ಬರವಾಗಿ ಕೊಂದ ಪತಿರಾಯ, ಆಕೆಯ ಸಾವಿನ ಮರುಕ್ಷಣವೇ ಫೇಸ್‌ಬುಕ್ ಲೈವ್ನಲ್ಲಿ ತಾನು ಮಾಡಿದ ಕೊಲೆಗೆ ಕಾರಣ ಬಹಿರಂಗಪಡಿಸಿದ್ದಾನೆ. ಈ ಭಯಾನಕ ಘಟನೆ ಕೇರಳದ ಪುನಲೂರಿನಲ್ಲಿ ಸಂಭವಿಸಿದೆ.
ಪುನಲೂರು ಬಳಿಯ ಕೂತನಾಡಿಯಲ್ಲಿ ತನ್ನ ಪತ್ನಿ ಸ್ನಾನಕ್ಕಿಳಿದ ಸಮಯವನ್ನು ನೋಡಿಕೊಂಡು, ಆಕೆಯ ಮೇಲೆ ಗಂಭೀರವಾಗಿ ಹಲ್ಲೆಗೈದು, ಕೊಲೆ ಮಾಡಿದ್ದಾನೆ. ಹೆಂಡತಿ ಸತ್ತಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಫೇಸ್‌ಬುಕ್ ಲೈವ್ ಹೋದ ಆರೋಪಿ ಪತಿ, ತಾನು ಆಕೆಯನ್ನು ಕೊಂದಿದ್ದೇಕೆ? ಎಂಬ ಕಾರಣವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಸೋಮವಾರ (ಸೆ.22) ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಮೃತಳನ್ನು ಶಾಲಿನಿ (39) ಎಂದು ಗುರುತಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಸೋಮವಾರ ಬೆಳಗ್ಗೆ 6:30ರ ಸುಮಾರಿಗೆ ಶಾಲಿನಿ ಅಡುಗೆಮನೆಯ ಹಿಂದಿನ ನೀರಿನ ಪೈಪ್‌ಲೈನ್ ಬಳಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಆಕೆಯ ಪತಿ ಐಸಾಕ್ (42) ಹಿಂದಿನಿಂದ ಬಂದು ಚಾಕುವಿನಿಂದ ಕುತ್ತಿಗೆ ಬೆನ್ನು ಸೇರಿ ಹಲವೆಡೆ ಹಲವು ಬಾರಿ ಇರಿದು, ಕೊಂದಿದ್ದಾನೆ. ಗಂಡ-ಹೆಂಡತಿ ಮಧ್ಯೆ ಆಗಾಗ್ಗೆ ನಡೆಯುತ್ತಿದ್ದ ಜಗಳಗಳು, ಮನಸ್ತಾಪವೇ ಕಾರಣ ಎನ್ನಲಾಗಿದೆ.
ಕೊಲೆಗೈದ ಬೆನ್ನಲ್ಲೇ ಫೇಸ್‌ಬುಕ್‌ನಲ್ಲಿ ಲೈವ್ ಹೋದ ಐಸಾಕ್, ಎರಡು ನಿಮಿಷಗಳ ವೀಡಿಯೊದಲ್ಲಿ, ಶಾಲಿನಿ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾನೆ. ನಮ್ಮಿಬ್ಬರ ಮಧ್ಯೆ ಯಾವುದು ಸರಿಯಿರಲಿಲ್ಲ. ನಮಗೆ ಇಬ್ಬರು ಮಕ್ಕಳು. ಕಿರಿಯ ಮಗನಿಗೆ ಕ್ಯಾನ್ಸರ್ ಖಾಯಿಲೆ ಇದೆ. ಅವನ ಆರೋಗ್ಯ ಬಗ್ಗೆ ಅವಳಿಗೆ ಕಿಂಚಿತ್ತು ಗಮನವಿರಲಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರಲು ಓಡಾಡುತ್ತಿದ್ದಳು. ಇದು ನನ್ನಲ್ಲಿ ಕೋಪ ತರಿಸಿತು. ಇದನ್ನೆಲ್ಲ ಇಲ್ಲಿಗೆ ಬಿಟ್ಟುಬಿಡು ಎಂದು ಎಚ್ಚರಿಸಿದೆ. ಆದರೆ, ಆಕೆ ಮಾತ್ರ ನನ್ನ ಯಾವುದೇ ಮಾತಿಗೆ ಕ್ಯಾರೇ ಎನ್ನಲಿಲ್ಲ ಎಂದು ಆರೋಪಿಸಿದ್ದಾರೆ.
ಕೊಲೆಗೈದ ಕೆಲವೇ ನಿಮಿಷಗಳಲ್ಲಿ ಸ್ಥಳದಿಂದ ಪರಾರಿಯಾದ ಐಸಾಕ್, ರಬ್ಬರ್ ತೋಟಕ್ಕೆ ತೆರಳಿ, ಅಲ್ಲಿಂದ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಹೋಗುವ ಮೂಲಕ ಸ್ಥಳೀಯ ಪೊಲೀಸರಿಗೆ ತನ್ನ ತಪ್ಪೊಪ್ಪಿಗೆ ಹೇಳಿಕೆ ತಿಳಿಸಿದ್ದ. ನಂತರದಲ್ಲಿ ಪುನಲೂರು ಪೊಲೀಸ್ ಠಾಣೆಗೆ ತಾನೇ ಹೋಗಿ, ಪತ್ನಿಯನ್ನು ಕೊಂದಿದ್ದಾಗಿ ಶರಣಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಖಾಕಿ ಪಡೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಿದೆ. ಪ್ರಸ್ತುತ, ಐಸಾಕ್ನನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ,(ಏಜೆನ್ಸೀಸ್).