ನ್ಯೂಸ್

ಕರೊನಾ ಬಳಿಕ ಬಂತು ಕವಾಸಾಕಿ ಕಾಯಿಲೆ!

ಲಂಡನ್/ವಾಷಿಂಗ್ಟನ್: ಬ್ರಿಟನ್ ಮತ್ತು ಅಮೆರಿಕದ ನೂರಾರು ಮಕ್ಕಳಲ್ಲಿ ಹೊಸ ಬಗೆಯ ಆರೋಗ್ಯ ಸಮಸ್ಯೆ ಕಂಡುಬಂದಿದ್ದು ಇದು ಬಾಲ್ಯದಲ್ಲಿ ಕಾಡುವ ಕವಾಸಾಕಿಯಂಥ ರೋಗವನ್ನು ಹೋಲುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಕರೊನಾ ಸಾಂಕ್ರಾಮಿಕ ವ್ಯಾಧಿಯ ನಡುವೆಯೇ ಈ ರೋಗ ಕಾಣಿಸಿಕೊಂಡಿದ್ದು, ಈ ಎರಡರ ನಡುವೆಯೂ ಸಂಬಂಧವಿದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್​ನ ಮಕ್ಕಳ ಸಾಂಕ್ರಾಮಿಕ ವ್ಯಾಧಿಗಳು ಹಾಗೂ ರೋಗ ನಿರೋಧಕತೆಯ ಕ್ಲಿನಿಕಲ್ ಉಪನ್ಯಾಸಕಿ ಡಾ. ಲಿಜ್ ವಿಟ್​ಕರ್ ಅಭಿಪ್ರಾಯಪಟ್ಟಿದ್ದಾರೆ. ಇದು ಕರೊನೋತ್ತರ ವ್ಯಾಧಿಯ ಲಕ್ಷಣದಂತೆ ಕಾಣುತ್ತದೆ ಎಂದಿದ್ದಾರೆ. ಬ್ರಿಟನ್​ನ ಸುಮಾರು 100 ಮಕ್ಕಳು, ಯುರೋಪ್​ನ ಹಲವು ದೇಶಗಳಲ್ಲಿ ಸಣ್ಣ ಸಂಖ್ಯೆಯಲ್ಲಿ ಮಕ್ಕಳು ಹೊಸ ಸಮಸ್ಯೆಯಿಂದ ಬಳಲುತ್ತಿದ್ದು ಕೆಲವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಕ್ಕಳಲ್ಲಿ ತೀವ್ರ ಜ್ವರ, ಊತ, ಕಣ್ಣು ಕೆಂಪಾಗುವಿಕೆ ಮತ್ತು ಸಾಮಾನ್ಯ ಮೈನೋವು ಮುಂತಾದ ಲಕ್ಷಣ ಕಂಡುಬಂತು. ಬಹುತೇಕ ಮಕ್ಕಳಲ್ಲಿ ಶ್ವಾಸಕೋಶ ಅಥವಾ ಉಸಿರಾಟದ ತೊಂದರೆ ಇರಲಿಲ್ಲ. ಆದರೆ ಏಳು ಮಕ್ಕಳನ್ನು ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ರೋಗದ ಬಗ್ಗೆ ಗಮನಹರಿಸುವಂತೆ ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್​ಎಚ್​ಎಸ್) ವೈದ್ಯರಿಗೆ ಏಪ್ರಿಲ್​ನಲ್ಲೇ ಸೂಚಿಸಲಾಗಿತ್ತು. ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುತ್ತಿದೆ.