ದಡು: ನಮ್ಮ ಪೂರ್ವಜರ ಕಾಲದಲ್ಲಿ ಈ ಬಾಲ್ಯ ವಿವಾಹ ಪದ್ಧತಿಗಳು ಹೆಚ್ಚು ಚಾಲ್ತಿಯಲ್ಲಿತ್ತು. ಆದ್ರೆ, ಕಾಲಕ್ರಮೇಣ ಹಾಗೂ ಕಾನೂನಿನಡಿ ಬಾಲ್ಯ ವಿವಾಹ ಅಪರಾಧ ಎಂಬ ವಿಷಯ ತಿಳಿಯುತ್ತಿದ್ದಂತೆ ಇಂತಹ ಮದುವೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತು. ಕಾನೂನು ಬಲವಾಗಿದ್ದರೂ ಕೂಡ ಇಂದಿಗೂ ಕೆಲವೆಡೆ ಕದ್ದುಮುಚ್ಚಿ ಹೆತ್ತವರು ತಮ್ಮ ಮಕ್ಕಳಿಗೆ ಕಂಕಣ ಕಟ್ಟಿಸುತ್ತಿದ್ದಾರೆ. ಈ ವಿಷಯದಲ್ಲಿ ಪಾಕಿಸ್ತಾನ ದೇಶವು ಮುಂಚೂಣಿಯಲ್ಲಿದೆ ಎಂಬುದೇ ಇದೀಗ ಭಾರೀ ಅಚ್ಚರಿಗೆ ಕಾರಣವಾಗಿದೆ. ಅದಲ್ಲದೇ ಇತ್ತೀಚಿನ ದಿನಗಳಲ್ಲಿ ಪಾಕ್ನ ಹಳ್ಳಿಗಳಲ್ಲಿ ಬಾಲ್ಯ ವಿವಾಹಗಳು ಯಾರ ಆಕ್ಷೇಪಣೆ ಇಲ್ಲದೆ, ಯಾವ ಅಡೆತಡೆಯೂ ಇಲ್ಲದೆ, ಕೇವಲ ಹಣದ ಹೊರೆ ಇಳಿಕೆಗೆ ಹೆಚ್ಚಾಗಿ ನಡೆಯುತ್ತಿದೆ ಎಂದರೆ ನಂಬ್ತೀರಾ? ಆಶ್ಚರ್ಯ ಅನಿಸಿದರೂ ಇದು ನಂಬಲೇಬೇಕಾದ ಕಟುಸತ್ಯ.
ಇದನ್ನೂ ಓದಿ: ಇಪಿಎಸ್ 95 ಪಿಂಚಣಿದಾರರ ಆಗ್ರಹ
ಈ ಹಿಂದೆ ಪಾಕಿಸ್ತಾನದಲ್ಲಿ ಬಾಲ್ಯ ವಿವಾಹ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಆದ್ರೆ, 2022ರಲ್ಲಿ ಉಂಟಾದ ಭೀಕರ ಪ್ರವಾಹದಿಂದ, ಹವಾಮಾನ ವೈಪರೀತ್ಯದಿಂದ ಇದೀಗ ಜನರ ಜೀವನ ಸಂಪೂರ್ಣವಾಗಿ ನಲುಗಿ ಹೋಗಿದೆ. ಅಂದಿನಿಂದ ಇಂದಿನವರೆಗೂ ಇಲ್ಲಿನ ಜನರಿಗೆ ತುತ್ತು ಅನ್ನಕ್ಕೂ ಕಷ್ಟವಾಗಿದ್ದು, ಭೂಮಿಯಲ್ಲಿ ಬೆಳೆ ಕಾಣದೆ, ಸಾಲದ ಹೊರೆ ತೀರಿಸಲಾಗದೆ, ತಮ್ಮ ಹೆಣ್ಣುಮಕ್ಕಳನ್ನು ಮತ್ತೊಬ್ಬರ ಮನೆಗೆ ಬಾಲ್ಯ ವಿವಾಹ ಮಾಡಿಕೊಡುವ ಮೂಲಕವೇ ಆರ್ಥಿಕ ಒತ್ತಡವನ್ನು ಕಳೆದುಕೊಳ್ಳುವಂತ ಕೆಟ್ಟ ಪರಿಸ್ಥಿತಿ ಇಲ್ಲಿನ ಪೋಷಕರಿಗೆ ಎದುರಾಗಿದೆ. ಸಿಂಧ್‌ನ ಖಾನ್ ಮೊಹಮ್ಮದ್ ಮಲ್ಲಾಹ್ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಬಾಲ್ಯ ವಿವಾಹಗಳು ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ.
ಬಾಲ್ಯ ಕಳೆಯುವ ವಯಸ್ಸು, ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆಯುವ ಕನಸು ಇದೆಲ್ಲವೂ ಸದ್ಯ ಇಲ್ಲಿನ ಹೆಣ್ಣುಮಕ್ಕಳಿಗೆ ಒಡೆದ ಕನ್ನಡಿಯಾಗಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ ಹೆಣಗಾಡುತ್ತಿರುವ ಪೋಷಕರು, ತಮ್ಮ ಮಕ್ಕಳನ್ನು ಹಣಕ್ಕಾಗಿ ಮತ್ತೊಂದು ಕುಟುಂಬಕ್ಕೆ ಬಾಲ್ಯ ವಿವಾಹ ಮಾಡಿಕೊಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮತ್ತೊಂದು ನಿದರ್ಶನ ಇತ್ತೀಚೆಗೆ ನಡೆದ ಶಮಿಲಾ (14) ಮತ್ತು ಆಕೆಯ ಸಹೋದರಿ ಅಮೀನಾ (13) ಮದುವೆ. ತಮ್ಮ ಹೆತ್ತವರ ಮಾತಿಗೆ, ಸಂಕಷ್ಟಕ್ಕೆ ಮಣಿದು ತೋರಿಸಿದ ಹುಡುಗನೊಂದಿಗೆ ಬಾಲ್ಯ ವಿವಾಹವಾಗಿದ್ದಾರೆ. ಈ ಹೆಣ್ಣುಮಕ್ಕಳು ತಾವು ಅನುಭವಿಸುತ್ತಿರುವ ಕಷ್ಟಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಭಾರತ ಯುವ ಅಭಿಯಾನ ಸಮಾರೋಪ; ದಿಶಾ ಭಾರತ್ ಆಯೋಜನೆ
ಅಪ್ಪ-ಅಮ್ಮನ ಕಷ್ಟ ನೋಡಲು ಆಗುತ್ತಿರಲಿಲ್ಲ. ಊಟಕ್ಕೂ ಬಹಳ ಕಷ್ಟವಾಗುತ್ತಿತ್ತು. ನಮ್ಮನ್ನು ಮದುವೆ ಮಾಡಿಕೊಟ್ಟರೆ ನಮ್ಮ ಹೆತ್ತವರಿಗೆ ಗಂಡನ ಮನೆಯಿಂದ ಹಣ ಸಿಗುತ್ತದೆ. ಇದು ಆರ್ಥಿಕ ಬಿಕ್ಕಟ್ಟನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ, ಆಶಯದಿಂದ ಬಾಲ್ಯ ವಿವಾಹಕ್ಕೆ ಕೊರಳೊಡ್ಡಿದೆವು ಎಂದು ಸಹೋದರಿಯರು ಹೇಳಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಮೀಲಾ ಅತ್ತೆ ಬೀಬಿ ಸಚಲ್, "ಆಕೆಗಾಗಿ ನಾವು 2 ಲಕ್ಷ ರೂ. ಹಣವನ್ನು ಅವರ ಹೆತ್ತವರಿಗೆ ಪಾವತಿಸಿದ್ದೇವೆ" ಎಂದಿದ್ದಾರೆ. ಜಾಗತಿಕವಾಗಿ ಬಾಲ್ಯ ವಿವಾಹ ಪಟ್ಟಿಯಲ್ಲಿ ಪಾಕಿಸ್ತಾನವು ಆರನೇ ಸ್ಥಾನದಲ್ಲಿದೆ ಎಂಬುದು ಸದ್ಯ ಅಚ್ಚರಿಯ ಸಂಗತಿ. ಇಂದಿಗೂ ಪಾಕ್ನ ಹಲವೆಡೆ ಮದುವೆಗೆ ಕಾನೂನು ವಯಸ್ಸು 16ರಿಂದ 18ರವರೆಗೆ ಇದೆ. ಇದರಲ್ಲಿಯೂ ಸಾಕಷ್ಟು ಬದಲಾವಣೆಗಳು ಕೂಡ ಇವೆ,(ಏಜೆನ್ಸೀಸ್).