ನ್ಯೂಸ್

ಕಡೂರು ಕಾಂಗ್ರೆಸ್​ ಶಾಸಕರ ವಿರುದ್ಧ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿದ ಮಹಿಳಾ ಕಾನ್ಸ್​ಟೆಬಲ್​​ ಸಸ್ಪೆಂಡ್!​

ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೆ.ಎಸ್​. ಆನಂದ್​ ವಿರುದ್ಧ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ಆಕ್ರೋಶ ಹೊರಹಾಕಿದ ಮಹಿಳಾ ಕಾನ್ಸ್​ಟೆಬಲ್​ರನ್ನು ಅಮಾನತು ಮಾಡಲಾಡಿದೆ.

ಕಡೂರು ಶಾಸಕರಿಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದರು ತೊಂದರೆ ಆದರೆ ಅದಕ್ಕೆ ಶಾಸಕರೇ ಕಾರಣ ಎಂದು ಮಹಿಳಾ ಪೇದೆ ಲಂತಾ ಎಂಬುವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದಕ್ಕೆ ಸಂಬಂಧಿಸಿದ ಸ್ಕ್ರೀನ್​ಶಾಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.

ಲತಾ ಅವರು ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಡೂರಿನಿಂದ ತರೀಕೆರೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಲತಾ, ಇದು ದ್ವೇಷದ ವರ್ಗಾವಣೆ ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ವರ್ಗಾವಣೆ ವಿರೋಧಿಸಿ ಸಬ್​ ಇನ್ಸ್​ಪೆಕ್ಟರ್ ಜತೆಯೂ ಲತಾ ಮಾತಿನ ಚಕಮಕಿ ನಡೆಸಿದ್ದಾರೆಂದು ತಿಳಿದುಬಂದಿದೆ.

ಲತಾ ಅವರ ಈ ವರ್ತನೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​ ಅವರ ಗಮನಕ್ಕೆ ಬಂದಿದ್ದು, ಲತಾರನ್ನ ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಹೆಲ್ಮೆಟ್​ ಧರಿಸಿದೇ ಓಡಾದಿದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರಿಗೆ ಲತಾ ಅವರು ದಂಡ ವಿಧಿಸಿದ್ದರು ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಆನಂದ್​ ಅವರು ಪೇದೆ ಜತೆ ಮಾತಿನ ಚಕಮಕಿ ನಡೆಸಿದ್ದ ವಿಡಿಯೋ ಈ ಹಿಂದೆ ವೈರಲ್​ ಆಗಿತ್ತು. ಇದೇ ದ್ವೇಷಕ್ಕೆ ವರ್ಗಾವಣೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)