ನ್ಯೂಸ್

ವಿಷ ಸೇವಿಸಿ ಅಪ್ರಾಪ್ತೆ ಸಾವು: BJP ಕಾರ್ಯಕರ್ತನ ವಿರುದ್ಧ ಪ್ರೇಮ ವಂಚನೆ, ಕಿರುಕುಳ ಆರೋಪ

ಚಿಕ್ಕಮಗಳೂರು: ಅಪ್ತಾಪ್ತೆಯೊಬ್ಬಳು ವಿಷ ಸೇವಿಸಿ, ಸಾವಿಗೆ ಶರಣಾಗಿರುವ ಘಟನೆ ಕುದರೆಮುಖ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಿಜೆಪಿ ಕಾರ್ಯಕರ್ತನ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.

ಕಳಸ ಪದವಿ ಪೂರ್ವ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿ ಜ.10 ರಂದು ಮನೆಯಲ್ಲಿದ್ದ ಕೀಟನಾಶಕವನ್ನು ಸೇವಿಸಿದ್ದಳು. ಆಕೆಯನ್ನು ಮಂಗಳೂರಿನ ಏ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ (ಜ.14) ಮೃತಪಟ್ಟಿದ್ದಾಳೆ.

ಅಪ್ರಾಪ್ತೆಯನ್ನು ಪ್ರೀತಿಸಿ ವಂಚಿಸಿರುವುದಲ್ಲದೆ, ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪ ಬಿಜೆಪಿ ಕಾರ್ಯಕರ್ತನಾಗಿ ನಿತೇಶ್ (25)​ ವಿರುದ್ಧ ಕೇಳಿಬಂದಿದೆ. ಸಾಯುವ ಕೊನೆಯ ಕ್ಷಣದಲ್ಲಿ ಅಪ್ರಾಪ್ತೆ ಡೆತ್​ನೋಟ್ ಬರೆದಿದ್ದು, ನಾನು ನಿತೀಶ್​ ಎಂಬ ಹುಡುಗನನ್ನು ಲವ್​ ಮಾಡುತ್ತಿದ್ದೆ. ನಮ್ಮಿಬ್ಬರ ಜಗಳದಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಉಲ್ಲೇಖಸಿದ್ದಾಳೆ. ನಿತೇಶ್ ವಿರುದ್ಧ ಮೃತಳ ಪಾಲಕರು ದೂರು ನೀಡಿದ್ದಾರೆ. ಆದರೆ, ದೂರು ದಾಖಲಿಸದೇ ಕುದುರೆ ಮುಖ ಪೊಲೀಸರು ಸತಾಯಿಸಿರುವ ಆರೋಪ ಕೇಳಿಬಂದಿದೆ.

ಆರಂಭದಲ್ಲಿ ದೂರು ದಾಖಲಿಸಲು ಹಿಂದೇಟು ಹಾಕಿದ್ದ ಕುದುರೆಮುಖ ಪೊಲೀಸರು, ಎಸ್.ಪಿ. ಸೂಚನೆ ಬಳಿಕ ನಿತೇಶ್ ವಿರುದ್ಧ ದೂರು ಸ್ವೀಕರಿಸಿದ್ದಾರೆ. ಆದರೆ, ಈವರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಗೋಜಿಗೂ ಹೋಗಿಲ್ಲ. ಆರೋಪಿ ವಿರುದ್ಧ ಕುದುರೆಮುಖ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಭರವಸೆಯೂ ಪಾಲಕರಿಗಿಲ್ಲ. ಹೀಗಾಗಿ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಪಾಲಕರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)