Chhattisgarh Boy: ಛತ್ತೀಸಗಢದ ಒಂದು ಹಳ್ಳಿಯ ದಿನಸಿ ಅಂಗಡಿಯಲ್ಲಿ ಕುಳಿತಿದ್ದ ಹುಡುಗನಿಗೆ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ, ಎಬಿಡಿ ವಿಲೀಯರ್ಸ್ ಮತ್ತು ಆರ್ಸಿಬಿ ಕ್ಯಾಪ್ಟನ್ ರಜತ್ ಪಟೀದಾರ್ಅವರಿಂದ ಫೋನ್ ಕರೆ ಬಂದಿರುವುದು ಇದೀಗ ಪೊಲೀಸರು ಮತ್ತು ಸ್ಥಳೀಯರನ್ನು ಅಚ್ಚರಿಗೊಳಿಸಿದೆ. ಸ್ವತಃ ಆ ಹುಡುಗರನ್ನೇ ಗೊಂದಲಕ್ಕೆ ದೂಡಿದೆ. ಈ ಪ್ರಕರಣ ಸ್ಥಳೀಯ ಪೊಲೀಸರ ಎಂಟ್ರಿಯಿಂದ ಬಗೆಹರಿದಿದೆ ಮತ್ತು ಸ್ಪಷ್ಟವಾಗಿದೆ. ಅಷ್ಟಕ್ಕೂ ಏನಿದು ವಿಚಿತ್ರ ಕೇಸ್ ಎಂಬ ಗೊಂದಲ ಈಗ ನಿಮ್ಮಲ್ಲಿ ಕಾಡುತ್ತಿರುವುದರಲ್ಲಿ ಅನುಮಾನವೇ ಬೇಡ.
ಇದನ್ನೂ ಓದಿ: ಬೆಂಗಳೂರು-ಬೆಳಗಾವಿ ಸೇರಿ 3 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ! PM Modi in Bengaluru
ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ದೇವ್‌ಭೋಗ್ ಎಂಬ ಹಳ್ಳಿಯಲ್ಲಿ ಈ ಘಟನೆ ವರದಿಯಾಗಿದೆ. ಮಡಗಾಂವ್ ನಿವಾಸಿಗಳಾದ ಮನೀಶ್ ಬಿಸಿ ಮತ್ತು ಕೇಮರಾಜ್ ಎಂಬ ಇಬ್ಬರು ಹುಡುಗರು, ಅಪ್ಪಟ್ಟ ಕ್ರಿಕೆಟ್ ಅಭಿಮಾನಿಗಳು. ಇತ್ತೀಚೆಗಷ್ಟೇ ಇವರಲ್ಲಿ ಒಬ್ಬರು ಹೊಸದಾಗಿ ಮೊಬೈಲ್ ಅಂಗಡಿಯಿಂದ ಜೂ.28ಕ್ಕೆ ಜಿಯೋ ಸಿಮ್ ಖರೀದಿಸಿದರು. ಈ ನಂಬರ್ ಅನ್ನು ಆಕ್ಟಿವ್ ಮಾಡಿಕೊಂಡ ಬಳಿಕ ವಾಟ್ಸಾಪ್ ಖಾತೆ ತೆರೆದಿದ್ದಾರೆ. ಇಲ್ಲೇ ಅವರಿಗೆ ಅಚ್ಚರಿ ಕಾದಿದ್ದು. ವಾಟ್ಸಾಪ್ ಡಿಪಿಯಲ್ಲಿ ಆರ್ಸಿಬಿ ಕ್ಯಾಪ್ಟನ್ ರಜತ್ ಪಟೀದಾರ್ ಫೋಟೋ ಇರುವುದು ಕಂಡು ಒಂದು ನಿಮಿಷ ಆಶ್ಚರ್ಯಚಕಿತರಾಗಿದ್ದರು. ಆದರೆ, ಹೀಗೆಲ್ಲ ಇರಬಹುದೇನೋ ಎಂದು ಸುಮ್ಮನಾಗಿ ಸಿಮ್ ಉಪಯೋಗಿಸುತ್ತಿದ್ದರು.
ಆದರೆ, ದಿನ ಕಳೆದಂತೆ ತಮ್ಮ ಸ್ನೇಹಿತರು, ಕುಟುಂಬಸ್ಥರು ಮತ್ತು ನೆರೆಹೊರೆಯವರಿಂದ ಬರಬೇಕಾ ದೂರವಾಣಿ ಕರೆಗಳ ಬದಲಿಗೆ ಸ್ಟಾರ್ ಕ್ರಿಕೆಟಿಗರಾದ ಎಬಿಡಿ ವಿಲೀಯರ್ಸ್, ವಿರಾಟ್ ಕೊಹ್ಲಿ ಎಂಬ ಹೆಸರಿನಲ್ಲಿ ಫೋನ್ಗಳು ಬರಲು ಶುರುವಾಯಿತು. ಇದರಿಂದ ಗಾಬರಿಗೊಂಡ ಇಬ್ಬರು, ಯಾರೋ ನಮಗೆ ಚಳ್ಳೆ ಹಣ್ಣು ತಿನಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಯಾಮಾರಿಸುವ ಪ್ರಯತ್ನದಲ್ಲಿದ್ದಾರೆ. ನಾವೂ ಅವರಂತೆಯೇ ಸುಳ್ಳು ಹೇಳೋಣ ಎಂದು ಮಾತನಾಡಿದವರಿಗೆಲ್ಲ 'ನಾನು ಎಂ.ಎಸ್. ಧೋನಿ' ಎಂದು ಕಿಚಾಯಿಸಲು ಪ್ರಾರಂಭಿಸಿದ್ದರು.
ಯಾವುದೇ ಕಾಲ್ ಬಂದರೂ ನಾನು ಮಹೇಂದ್ರ ಸಿಂಗ್ ಧೋನಿ ಮಾತಾಡ್ತಿರೋದು ಎಂದು ಕಾಲೆಳೆಯುತ್ತಿದ್ದರು. ಇನ್ನು ಜು.15ರಂದು ಮನೀಶ್ಗೆ ಕರೆ ಮಾಡಿದ ಕ್ರಿಕೆಟಿಗ ರಜತ್ ಪಟೀದಾರ್, "ಬಾಯ್ ನಾನು ರಜತ್ ಮಾತಾಡ್ತಿರೋದು. ಇದು ನನ್ನ ವೈಯಕ್ತಿಕ ಫೋನ್ ನಂಬರ್. ದಯವಿಟ್ಟು ಇದನ್ನು ಹಿಂತಿರುಗಿಸಿ" ಎಂದು ಸರಳವಾಗಿ ಕೋರಿದ್ದಾರೆ. ಅದರೆ, ಇದು ಕೂಡ ಸುಳ್ಳು ಎಂದು ಭಾವಿಸಿದ ಹುಡುಗರು, "ನಾನು ಧೋನಿ ಮಾತಾಡ್ತಿರೋದು" ಎಂದಿದ್ದಾರೆ.
'ಇದು ನನ್ನ ನಂಬರ್. ನನ್ನ ಫ್ಯಾಮಿಲಿ, ಫ್ರೆಂಡ್ಸ್ ಮತ್ತು ಕ್ರಿಕೆಟ್ ವಲಯದೊಂದಿಗೆ ಮಾತುಕತೆ ನಡೆಸಲು ಈ ಸಿಮ್ನ ಅವಶ್ಯಕತೆಯಿದೆ. ದಯವಿಟ್ಟು ನನಗೆ ಹಿಂತಿರುಗಿಸಿ' ಎಂದು ಮತ್ತೊಮ್ಮೆ ನಯವಾಗಿ ಮನವಿ ಮಾಡಿದ್ದಾರೆ. ಇದ್ಯಾವುದಕ್ಕೂ ಬಗ್ಗದ ಹುಡುಗರ ತಮಾಷೆಗೆ ಬೇಸತ್ತ ರಜತ್, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ಮಾಡಿ, ದೂರು ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹುಡುಗರ ಮನೆಗೆ ಬಂದ ಖಾಕಿ, ನೀವು ಮಾತಾಡ್ತಿರೋದು ನಿಜವಾದ ರಜತ್ ಪಟೀದಾರ್ ಎಂದು ವಿವರಿಸಿ, ಸಿಮ್ ಹಿಂತಿರುಗಿಸುವ ವ್ಯವಸ್ಥೆ ಮಾಡಿದ್ದಾರೆ.
ಈ ಕುರಿತು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹುಡುಗರು, "ಈ ವಿಷಯ ನಿಜಕ್ಕೂ ನಮಗೆ ಆಶ್ಚರ್ಯ ತಂದಿದೆ. ನಾವು ಯಾರೋ ನಮ್ಮನ್ನು ಕ್ರಿಕೆಟಿಗರ ಹೆಸರಿನಲ್ಲಿ ಕಾಲೆಳೆಯುತ್ತಿದ್ದಾರೆ ಎಂದು ಧೋನಿ ಹೆಸರೇಳಿ ಮಾತಾಡ್ತಿದ್ದೆವು. ಆದರೀಗ, ಪೊಲೀಸರು ಹೇಳಿದ ಸಂಗತಿ ತಿಳಿದು ಸುಮ್ಮನಾದೆವು. ನಮ್ಮ ಜೀವನದಲ್ಲಿ ವಿರಾಟ್ ಕೊಹ್ಲಿ ಜತೆ ಮಾತಾಡಬೇಕು, ನೋಡಬೇಕು ಎಂಬ ಮಹಾದಾಸೆಯಿತ್ತು. ಈಗ ಆ ಕನಸು ಮಾತಾಡುವ ಮೂಲಕ ಈಡೇರಿದೆ. ಕೊಹ್ಲಿ ಅವರ ಧ್ವನಿ ನಾವು ಕೇಳಿಸಿಕೊಂಡೆವು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).