ಹೆಣ್ಣು ಕರಡಿಯ ಮರಿ ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡಿದ್ದ ತಾಯಿ ಕರಡಿ
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ-ತಂಗಿ ದಾಳಿ ಮಾಡಿ ಕೊಂದ ಕರಡಿ
ತೀವ್ರ ಕೋಪಗೊಂಡ ಗ್ರಾಮಸ್ಥರಿಂದ ಕಡಿಯನ್ನು ಕೊಲ್ಲುಲು ಯತ್ನ
Bear Kills Brother Sister: ತನ್ನ ಮರಿ ಸಾವನ್ನಪ್ಪಿದ ದುಃಖದಲ್ಲಿದ್ದ ತಾಯಿ ಕರಡಿ ದಾಳಿ ನಡೆಸಿ, ಹೊಲದಲ್ಲಿದ್ದ ಅಣ್ಣ-ತಂಗಿಯನ್ನು ಕೊಂದ ಘಟನೆ ಛತ್ತೀಸ್‌ಗಢದಲ್ಲಿ ವರದಿಯಾಗಿದೆ. ಈ ಆಘಾತಕಾರಿ ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಕರಡಿಯನ್ನು ಕೊಲ್ಲಲು ಯತ್ನಿಸಿದ್ದು, ಈ ದೃಶ್ಯಗಳ ವೀಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯ ನರಹರಪುರ ಅರಣ್ಯ ವ್ಯಾಪ್ತಿಯ ಮರ್ಕಟೋಲಾ-ಲಾರಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಡೆಯುವುದಕ್ಕೂ ಒಂದು ದಿನ ಮುಂಚಿತವಾಗಿ ಹೆಣ್ಣು ಕರಡಿಯೊಂದರ ಮರಿಯು ಸಾವನ್ನಪ್ಪಿತ್ತು. ತನ್ನ ಮರಿಯನ್ನು ಕಳೆದುಕೊಂಡ ತೀವ್ರ ನೋವು ಮತ್ತು ಆಕ್ರೋಶದಲ್ಲಿದ್ದ ತಾಯಿ ಕರಡಿಯು, ಗ್ರಾಮದ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜನರ ಮೇಲೆ ಹಠಾತ್ ದಾಳಿ ನಡೆಸಿತ್ತು.
ಕರಡಿಯ ಈ ಅನಿರೀಕ್ಷಿತ ಹಾಗೂ ಅತ್ಯಂತ ಭೀಕರ ದಾಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹಲಾಲ್ ಖೋರ್ ಜುರ್ರಿ ಹಾಗೂ ಅವರ ಅಕ್ಕ ಚಮ್ರಿನ್ ಬಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇಬ್ಬರು ಒಡಹುಟ್ಟಿದವರು ಒಟ್ಟಿಗೆ ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕಸಾಗರ ಉಂಟುಮಾಡಿದೆ. ಈ ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಡಿ ಇಬ್ಬರ ಜೀವ ತೆಗೆದದ್ದರಿಂದ ಆಕ್ರೋಶದಲ್ಲಿದ್ದ ಗ್ರಾಮಸ್ಥರು, ಕರಡಿಯನ್ನು ಹಾಗೆಯೇ ಬಿಡಬಾರದು ಎಂದು ಅದನ್ನು ಕೊಲ್ಲಲು ಮುಂದಾದರು. ಬಡಿಗೆ ಮತ್ತು ಕಲ್ಲುಗಳಿಂದ ಕರಡಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ತಕ್ಷಣ ಎಚ್ಚೆತ್ತ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಮೃತದೇಹಗಳ ಬಳಿಯೇ ಇದ್ದ ಕರಡಿಯನ್ನು ಹತ್ತಿರ ಹೋಗಿ ರಕ್ಷಿಸುವುದು ಕಷ್ಟವಾಗಿತ್ತು. ಆದರೆ, ಎಚ್ಚೆತ್ತ ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ತಂಡವು ಧೈರ್ಯ ಮಾಡಿ, ಮತ್ತಿನ ಇಂಜೆಕ್ಷನ್ ಬಳಸಿ ಕರಡಿಯನ್ನು ಯಶಸ್ವಿಯಾಗಿ ಸೆರೆಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸಿದೆ.