ನ್ಯೂಸ್

ತೊಗರಿಗೂ ರಾಸಾಯನಿಕ ಬೆರಕೆ, ಜನರೇ ಎಚ್ಚರಿಕೆ! ಅಸಲಿ ಎಂದು ನಂಬಿಸಿ ಮಾರಾಟ

| ಪಂಕಜ ಕೆ.ಎಂ. ಬೆಂಗಳೂರು

ದಿನನಿತ್ಯ ಬಳಸುವ ತೊಗರಿ ಬೇಳೆಯೂ ಕಲಬೆರಕೆ ಆಗುತ್ತಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಅಸಲಿ ಬೇಳೆ ಎಂದು ನಂಬಿಸಿ ರಾಸಾಯನಿಕಯುಕ್ತ ನಕಲಿ ಬೇಳೆಯನ್ನು ರಾಜ್ಯದಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿರುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪರೀಕ್ಷೆಯಲ್ಲಿ ದೃಢಪಟ್ಟಿದೆ. ತೊಗರಿ ಬೇಳೆ ನಿತ್ಯ ಬಳಕೆ ಮಾಡುವ ಆಹಾರ ಪದಾರ್ಥವಾಗಿದೆ. ಉತ್ತರ ಭಾರತದಲ್ಲಿ ಕಳೆ ಸಸ್ಯವಾಗಿರುವ ಬೇಳೆಯನ್ನು ತಂದು ದಕ್ಷಿಣ ಭಾರತದಲ್ಲಿ ನಾಟಿ ತೊಗರಿ ಬೇಳೆ ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿದೆ. ಹುಳು ಹಿಡಿದು, ಮುಗ್ಗುಲುಗಟ್ಟಿದ ಬೇಳೆಗೆ ರಾಸಾಯನಿಕ ಮಿಶ್ರಿತ ಬಣ್ಣ ಬಳಸಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ರಾಜ್ಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಆಹಾರ ವಿಶ್ಲೇಷಕ ಟಿ.ಪಿ. ಚೇತನ್ ಎಚ್ಚರಿಸಿದ್ದಾರೆ.

ಜನಜಾಗೃತಿ ಅಭಿಯಾನ: ಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು, ಫುಡ್ ಸೇಫ್ ಆನ್ ವ್ಹೀಲ್ ಎಂಬ ಮೊಬೈಲ್ ವಾಹನ ಮೂಲಕ ಆಹಾರ ವಿಶ್ಲೇಷಕರು ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಾ ವಿಧಾನಗಳನ್ನು ತಿಳಿಸಿಕೊಡುತ್ತಿದ್ದಾರೆ. ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.

ಕಳಪೆ ಬೇಳೆ ಪತ್ತೆ ಹೇಗೆ?

  • ಸಾಮಾನ್ಯ ಗಾತ್ರದ ಗುಣಮಟ್ಟದ ಬೇಳೆ ಒಂದು ಕಡೆ ಗುಂಡಾಗಿರುತ್ತದೆ
  • ಕೇಸರ್ ದಾಲ್ ಹೆಸರಿನ ಚೌಕಾಕಾರದ ಬೇಳೆ ಎರಡೂ ಕಡೆ ಚಪ್ಪಟೆ
  • ತೊಗರಿ ಬೇಳೆ ದರ ಕೆಜಿಗೆ 180-200 ರೂ.ಗೂ ಅಧಿಕ ಇರುತ್ತದೆ
  • ಅತೀ ಕಡಿಮೆ ದರಕ್ಕೆ ಮಾರಾಟ ಮಾಡುವ ಬೇಳೆ ಬಹುತೇಕ ನಕಲಿ

ಸ್ಟ್ರೋಕ್, ಕ್ಯಾನ್ಸರ್ ಸಾಧ್ಯತೆ

ಕಲಬೆರಕೆ ಹಾಗೂ ಬಣ್ಣ ಕಟ್ಟಿದ ತೊಗರಿ ಬೇಳೆಯನ್ನು ನಿತ್ಯ 3-6 ತಿಂಗಳ ಕಾಲ ಸೇವಿಸಿದಲ್ಲಿ ಪಾರ್ಶ್ವವಾಯು (ಸ್ಟ್ರೋಕ್), ಕ್ಯಾನ್ಸರ್, ನರ ದೌರ್ಬಲ್ಯ ಸಮಸ್ಯೆ ಉಂಟಾಗುವ ಅಪಾಯವಿರುತ್ತದೆ. ಜತೆಗೆ ಲ್ಯಾಪ್ಟೋಡಿಸಾ ಎಂಬ ನರ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಬೇಳೆ ಕಾಳುಗಳ ಖರೀದಿ ಮತ್ತು ಬಳಕೆ ವೇಳೆ ಬಣ್ಣ ಮತ್ತು ಆಕಾರಕ್ಕೆ ಮಾರುಹೋಗದೆ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಬೇಕು. ಬೇಳೆಕಾಳುಗಳನ್ನು ತೊಳೆದಾಗ ಹೆಚ್ಚಿನ ಪ್ರಮಾಣದಲ್ಲಿ ಬಣ್ಣ ಕಾಣಿಸಿಕೊಂಡರೆ ಅಂತಹ ಬೇಳೆಯ ಬಳಕೆ ಮಾಡಬಾರದು.

ಯಾವುದೇ ಆಹಾರಪದಾರ್ಥ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಎಚ್ಚರ ವಹಿಸಬೇಕು. ಕಲಬೆರಕೆ ಇಲ್ಲವೇ ಹಾಳಾದ ಪದಾರ್ಥಗಳಿಗೆ ರಾಸಾಯನಿಕ ಬಣ್ಣ ಬಳಕೆ ಮಾಡಿರುವ ಸಾಧ್ಯತೆ ಇರುತ್ತದೆ. ಇಂತಹ ಪದಾರ್ಥಗಳ ಸೇವನೆಯಿಂದ ನರ ಸಂಬಂಧಿ ರೋಗ ಹಾಗೂ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆಗಳಿರುತ್ತದೆ. | ಟಿ.ಪಿ.ಚೇತನ್, ಆಹಾರ ವಿಶ್ಲೇಷಕ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ