ನ್ಯೂಸ್

ಅಕ್ಕಸಾಲಿಗನಿಗೇ ನಕಲಿ ಒಡವೆ ಕೊಟ್ಟು 2 ಲಕ್ಷ ರೂಪಾಯಿ ಯಾಮಾರಿಸಿದ !

chandru

ಬೆಂಗಳೂರು: ನಕಲಿ ಚಿನ್ನದ ಒಡವೆ ಗಿರವಿ ಇಟ್ಟು 2 ಲಕ್ಷ ರೂ. ಸಾಲ ಪಡೆದು ವ್ಯಕ್ತಿಯೊಬ್ಬ ಅಕ್ಕಸಾಲಿಗನಿಗೆ ವಂಚಿಸಿದ್ದಾನೆ. ಹನುಮಂತನಗರದ ಹರೀಶ್ ಚಾಂದ್ ವಂಚನೆಗೆ ಒಳಗಾದವರು. ಆರೋಪಿ ಧನಶೇಖರ್ (47) ಎಂಬಾತನ ವಿರುದ್ಧ ಹನುಮಂತನಗರ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಹರೀಶ್ ಅವರ ಗಿರವಿ ಅಂಗಡಿಗೆ ಜು.30ರಂದು ಹೋಗಿದ್ದ ಧನಶೇಖರ್, ತುರ್ತಾಗಿ ಹಣ ಬೇಕಾಗಿದೆ. 28 ಗ್ರಾಂ ಚಿನ್ನಾಭರಣ ಇಟ್ಟುಕೊಂಡು 80 ಸಾವಿರ ರೂ. ಕೊಡುವಂತೆ ಮನವಿ ಮಾಡಿದ್ದ. ಆಗ ಹರೀಶ್ ಚಾಂದ್, ಒಡವೆ ಪಡೆದು ಸಾಲ ಕೊಟ್ಟಿದ್ದರು. ಹತ್ತೇ ದಿನಗಳಲ್ಲಿ ವಾಪಸ್ ಬಂದ ಧನಶೇಖರ್, ಸಾಲ ಮರುಪಾವತಿ ಮಾಡಿ ಆಭರಣ ಬಿಡಿಸಿಕೊಂಡು ಹೋಗಿದ್ದ. ನಂತರ ಆ.17ರ ರಾತ್ರಿ 7 ಗಂಟೆಯಲ್ಲಿ ಮತ್ತೆ ಗಿರವಿ ಅಂಗಡಿ ಹೋಗಿದ್ದ ಧನಶೇಖರ್, 76 ಗ್ರಾಂ ಚಿನ್ನ ಕೊಟ್ಟು 2.5 ಲಕ್ಷ ರೂ. ಸಾಲ ಕೊಡುವಂತೆ ಕೇಳಿದ್ದ. ಆಭರಣ ಪಡೆದ ಹರೀಶ್ ಅದರ ಅಸಲಿತನ ಪರೀಕ್ಷೆ ನಡೆಸಿ 2 ಲಕ್ಷ ರೂ. ಮಾತ್ರ ಸಾಲ ಕೊಡುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪದ ಆರೋಪಿ, 2.5 ಲಕ್ಷ ರೂ. ಸಾಲ ಬೇಕೇಬೇಕು. ಕೊಡಲು ಸಾಧ್ಯವಾಗದೆ ಇದ್ದರೇ ಆಭರಣ ವಾಪಸ್ ಕೊಡುವಂತೆ ಕೇಳಿದ್ದ. ಆಗ ಹರೀಶ್ ಒಡವೆ ಕೊಟ್ಟು ಕಳುಹಿಸಿದ್ದರು. 10 ನಿಮಿಷದ ನಂತರ ವಾಪಸ್ ಬಂದು 2.10 ಲಕ್ಷ ರೂ. ಆದರೂ ಸಾಲ ಕೊಡಿ. ತುಂಬಾ ಕಷ್ಟದಲ್ಲಿ ಸಿಲುಕಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದ.

ಆಗ ಒಡವೆ ಪಡೆದು ತೂಕ ಮಾಡಿದಾಗ ಈ ಮೊದಲು ಕೊಟ್ಟ ಆಭರಣದಷ್ಟೇ ತೂಕ ಕಂಡುಬಂದಿದ್ದರಿಂದ 2.10 ಲಕ್ಷ ರೂ. ಕೊಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಅನುಮಾನ ಬಂದು ಆಭರಣ ಪರೀಕ್ಷೀಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಕೂಡಲೇ ಮೊಬೈಲ್ ನಂಬರ್​ಗೆ ಕರೆ ಮಾಡಿದಾಗ ಸಂಪರ್ಕ ಲಭ್ಯವಾಗಿಲ್ಲ. ಮೋಸ ಮಾಡುವ ಉದ್ದೇಶಕ್ಕೆ ಪರೀಕ್ಷೆ ಮಾಡಿದ್ದ ಆಭರಣಕ್ಕೆ ಹೋಲಿಕೆ ಆಗುವ ನಕಲಿ ಒಡವೆ ಕೊಟ್ಟು ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.