ನ್ಯೂಸ್

ಏಪ್ರಿಲ್ 2ರಿಂದ 100% ಪರಸ್ಪರ ಸುಂಕ..; ಭಾರತದ ವಿರುದ್ಧ ಡೊನಾಲ್ಡ್​​ ಟ್ರಂಪ್ ಘೋಷಣೆ | Donald Trump

ವಾಷಿಂಗ್ಟನ್​ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇಂದು (ಮಾರ್ಚ್ 5) ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಯಾವ ದೇಶ ನಮ್ಮ ಮೇಲೆ ಯಾವುದೇ ಸುಂಕ ವಿಧಿಸುತ್ತದೆಯೋ, ನಾವು ಅವರ ಮೇಲೂ ಅದೇ ಸುಂಕವನ್ನು ವಿಧಿಸುತ್ತೇವೆ ಎಂದು ಅವರು ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಟ್ರಂಪ್ ಭಾರತ ಮತ್ತು ಚೀನಾದ ಬಗ್ಗೆಯೂ ಪ್ರಸ್ತಾಪಿಸಿದರು.

ಭಾರತ ನಮ್ಮ ಮೇಲೆ ಶೇ.100ರಷ್ಟು ಆಟೋ ಸುಂಕ ವಿಧಿಸುತ್ತದೆ ಎಂದು ಅವರು ಹೇಳಿದರು. ಭಾರತ, ಚೀನಾ, ಮೆಕ್ಸಿಕೊ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ಸುಂಕ ವಿಧಿಸಲಿದೆ. ಚೀನಾ ಎರಡು ಪಟ್ಟು ಸುಂಕ ವಿಧಿಸುತ್ತದೆ ಮತ್ತು ದಕ್ಷಿಣ ಕೊರಿಯಾ ನಾಲ್ಕು ಪಟ್ಟು ಸುಂಕ ವಿಧಿಸುತ್ತದೆ. ಆದರೆ ನಾವು ಅವರಿಗೆ ಮಿಲಿಟರಿ ನೆರವು ನೀಡುತ್ತೇವೆ. ಆದರೆ ಏಪ್ರಿಲ್ 2ರಿಂದ ಆ ದೇಶದ ಮೇಲೆ ಅದು ನಮ್ಮ ಮೇಲೆ ವಿಧಿಸುವ ಸುಂಕದಂತೆಯೇ ಅದೇ ಸುಂಕವನ್ನು ವಿಧಿಸುತ್ತೇವೆ. ಇದನ್ನು ಪರಸ್ಪರ ಸುಂಕ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಏಪ್ರಿಲ್ 1ರಿಂದಲೇ ಸುಂಕ ವಿಧಿಸಬೇಕು ಎಂದುಕೊಂಡಿದ್ದೆ ಆದರೆ ಆ ದಿನವನ್ನು ಮೂರ್ಖರ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಏಪ್ರಿಲ್​ 2ರಿಂದ ಅಮೆರಿಕವು ಹಲವಾರು ರಾಷ್ಟ್ರಗಳ ಮೇಲೆ ಪರಸ್ಪರ ಸುಂಕಗಳನ್ನು ವಿಧಿಸುತ್ತದೆ ಎಂದು ಟ್ರಂಪ್​ ಘೋಷಿಸಿದರು. ಇತ್ತೀಚೆಗೆ ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಟ್ರಂಪ್, ಅಮೆರಿಕದ ಪರಸ್ಪರ ಸುಂಕಗಳಿಂದ ಭಾರತವನ್ನು ಬಿಡಲಾಗುವುದಿಲ್ಲ ಎಂದು ಹೇಳಿದ್ದರು. ಮತ್ತು ಸುಂಕ ರಚನೆಯ ಕುರಿತು ಯಾರೂ ನನ್ನೊಂದಿಗೆ ವಾದಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

ಅಧ್ಯಕ್ಷ ಟ್ರಂಪ್ ತಮ್ಮ ಭಾಷಣವನ್ನು ಅಮೆರಿಕ ಹಿಂತಿರುಗಿದೆ ಎಂದು ಹೇಳುವ ಮೂಲಕ ಪ್ರಾರಂಭಿಸಿದರು. ಅಮೆರಿಕದ ಗತಿ ಮರಳಿದೆ, ನಮ್ಮ ಆತ್ಮ ಮರಳಿದೆ, ನಮ್ಮ ಹೆಮ್ಮೆ ಮರಳಿದೆ, ನಮ್ಮ ಆತ್ಮವಿಶ್ವಾಸ ಮರಳಿದೆ, ಈಗ ಅಮೆರಿಕದ ಜನರು ತಮ್ಮ ಎಲ್ಲಾ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.(ಏಜೆನ್ಸೀಸ್​​)