ಕೋಲಾರ ನಗರಸಭೆಗೆ ತೆರಿಗೆ ಪಾವತಿಸಲು ಸಾಲಿನಲ್ಲಿ ನಿಂತಿರುವ ನಾಗರಿಕರು.  
ನ್ಯೂಸ್

ತೆರಿಗೆ ಪಾವತಿಗೆ ನಗರಸಭೆಯಲ್ಲಿ ಅವ್ಯವಸ್ಥೆ

ಕೋಲಾರ: ತೆರಿಗೆ ಪಾವತಿಗೆ ನಗರಸಭೆಯಿಂದ ಒಂದು ತಿಂಗಳ ಅವಧಿಗೆ ವಿಶೇಷ ರಿಯಾಯಿತಿ ನೀಡಿದ್ದು, ಸಮರ್ಪಕ ವ್ಯವಸ್ಥೆ ಮಾಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2025&26ನೇ ಸಾಲಿನ ಆಸ್ತಿ, ನೀರಿನ ತೆರಿಗೆ, ಯುಜಿಡಿ ತೆರಿಗೆ ಪಾವತಿಸುವುದು ಅತ್ಯಂತ ಕ್ಲಿಷ್ಟವಾಗಿ ಪರಿಣಮಿಸಿದೆ. ಸಾರ್ವಜನಿಕರು ತೆರಿಗೆ ಕಟ್ಟಲು ಕನಿಷ್ಠ ಎರಡರಿಂದ ಮೂರು ದಿನ ಅಲೆದಾಡಬೇಕಾದ್ದರಿಂದ ಬೇಸತ್ತ ನಾಗರಿಕರು ನಗರಸಭೆ ಆಡಳಿತ ವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈಗಾಗಲೇ ತೆರಿಗೆ ವಸೂಲಿಯಲ್ಲಿ ತೀವ್ರ ಹಿನ್ನಡೆ ಸಾಧಿಸಿರುವ ನಗರಸಭೆಯಲ್ಲಿ ಅವ್ಯವಸ್ಥೆಗಳೇ ಹೆಚ್ಚಿದ್ದು, ತೆರಿಗೆ ಸಂಗ್ರಹ ಸಂಬಂಧ ಸಾಮಾನ್ಯ ಸಭೆಗಳಲ್ಲಿ ತೀವ್ರ ಟೀಕೆಗೂ ಒಳಗಾಗಿದೆ. ಆಡಳಿತದ ಕಾರ್ಯವೈಖರಿಯಿಂದ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಲು ಬರುವ ನಾಗರಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಸ್ವಯಂ ಘೋಷಿತ ಆಸ್ತಿ ತೆರಿಗೆ ನಮೂನೆ ಮುದ್ರಿಸಿಕೊಡಲು ತಲಾ 50 ರೂ. ನೀಡಿ ಕನಿಷ್ಠ ಎರಡು ದಿನವಾದರೂ ಕಾಯಬೇಕಾದ ಪರಿಸ್ಥಿತಿ ಇದೆ. ಜತೆಗೆ ನೀರು, ಯುಜಿಡಿ, ಗ್ರಂಥಾಲಯ ತೆರಿಗೆಗೆ ಚಲನ್​ ಜನರೇಟ್​ ಮಾಡಿಸಿಕೊಳ್ಳಲು ತಾಸುಗಟ್ಟಲೇ ಕಾಯಬೇಕಾಗಿದೆ.

ಕನಿಷ್ಠ ಎರಡು ದಿನ ಕೆಲಸ, ಕಾರ್ಯ ಬಿಟ್ಟು ನಗರಸಭೆಗೆ ಅಲೆದಾಡಿದರೆ ಆಸ್ತಿ ತೆರಿಗೆ ನಮೂನೆ, ಹಣ ಸಂದಾಯಕ್ಕೆ ಅಗತ್ಯವಾದ ಚಲನ್​ ಪ್ರತಿಗಳು ಲಭ್ಯವಾಗುತ್ತವೆ ಆದರೆ ಇಷ್ಟಕ್ಕೆ ಕೆಲಸ ಮುಗಿಯುವುದಿಲ್ಲ. ನಾಗರಿಕರು ಅಲ್ಲಿಂದ ನಗರಸಭೆಯ ಕಿಟಕಿಯಲ್ಲಿ ಅಳವಡಿಸಿರುವ ಬ್ಯಾಂಕ್​ ಶಾಖೆಯಲ್ಲೇ ಹಣ ಸಂದಾಯ ಮಾಡಬೇಕಾದ ಕಾರಣ ಇಡೀ ದಿನ ಸರದಿಯಲ್ಲೇ ನಿಲ್ಲುವ ಶಿಕ್ಷೆ ಅನುಭವಿಸಬೇಕಾಗಿದೆ.

ಪ್ರಾಮಾಣಿಕವಾಗಿ ತೆರಿಗೆಕಟ್ಟುವುದೇ ಒಂದು ತಪ್ಪು ಎನ್ನುವ ವಾತಾವರಣವನ್ನು ನಗರಸಭೆ ಆಡಳಿತ ಸೃಷ್ಟಿ ಮಾಡಿದೆ, ಒಂದು ಮನೆಯ ತೆರಿಗೆ ಕಟ್ಟಲು ಕನಿಷ್ಠ 2 ದಿನ ಹಾಳಾಗುತ್ತಿದೆ ಎಂದು ನಗರಸಭೆ ಆಡಳಿತ ಮಂಡಳಿಗೆ ಶಾಪ ಹಾಕುತ್ತಿದ್ದಾರೆ.

ಕನಿಷ್ಠ ಕೌಂಟರ್​ಗಳ ಸಂಖ್ಯೆ ಹೆಚ್ಚಿಸಿ ಜನರಿಗೆ ನೆರವಾಗುವ ಬದ್ಧತೆಯೂ ಇಲ್ಲಿನ ಅಧಿಕಾರಿಗಳಿಗೆ ಇಲ್ಲವಾದ ಕಾರಣ ಹಿರಿಯ ನಾಗರಿಕರು ಬಿಸಿಲಿನ ಬೇಗೆ ಸಹಿಸಿಕೊಂಡು ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಆಟೋ ಚಾಲಕ ವಿಶ್ವನಾಥ್​ ಅಸಮಾಧಾನ ವ್ಯಕ್ತಪಡಿಸಿದರು.