ನ್ಯೂಸ್

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ: ಮತದಾನ ಬಿರುಸು | By-Elections

By-Elections : ರಾಜಕೀಯ ಪಕ್ಷಗಳ ನಾಯಕರ ಪ್ರತಿಷ್ಠೆಯನ್ನು ಒರೆಗೆ ಹಚ್ಚಿರುವ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ, ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ ಆರಂಭದಲ್ಲೇ ಮತದಾನ ಬಿರುಸು ಪಡೆದುಕೊಂಡಿದೆ. ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ (ಶಿಗ್ಗಾಂವಿ), ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ತೊರೆದು ಕಾಂಗ್ರೆಸ್​ಗೆ ಜಿಗಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (ಚನ್ನಪಟ್ಟಣ), ಕಾಂಗ್ರೆಸ್ ಸಂಸದ ಈ.ತುಕಾರಾಮ್ ಪತ್ನಿ ಅನ್ನಪೂರ್ಣ, ಬಿಜೆಪಿಯ ಬಂಗಾರು ಹನುಮಂತು (ಸಂಡೂರು- ಎಸ್​ಟಿ ಮೀಸಲು) ಹಾಗೂ ಶಿಗ್ಗಾಂವಿಯಲ್ಲಿ ಕಾಂಗ್ರೆಸ್​ನ ಯಾಸೀರ್ ಪಠಾಣ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸಂಡೂರಿನಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಸಂಸದ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಅವರು ತಮ್ಮ ಕುಟುಂಬ ಸಮೇತ ಮತ ಚಲಾಯಿಸಿದರು. ಶಿಗ್ಗಾಂವಿಯಿಂದ ಕಣಕ್ಕಿಳಿದಿರುವ ಬಸವರಾಜ ಬೊಮ್ಮಾಯಿ ಪುತ್ರ ಭರತ್​ ಬೊಮ್ಮಾಯಿ ಮತದಾನ ಮಾಡುವ ಮುನ್ನ ತಮ್ಮ ಕ್ಷೇತ್ರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಲಿದ್ದಾರೆ.

ಹಾವೇರಿಯಲ್ಲಿ ಬೆಳಗ್ಗೆ 9 ಗಂಟೆಗೆ ಶೇ.10.08ರಷ್ಟು ಮತದಾನ ಆಗಿದೆ. 10,877 ಪುರುಷರು ಹಾಗೂ 23,951 ಮಹಿಳೆಯರು ಮತದಾನ ಮಾಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಸಂಡೂರಿನಲ್ಲಿ 9 ಗಂಟೆಯವರೆಗೆ ಶೇ‌ 9.7% ಮತದಾನ ನಡೆದಿದೆ. ತಾಲೂಕಿನ ವಡ್ಡು ಗ್ರಾಮದಲ್ಲಿ ಆರಂಭದಲ್ಲಿಯೇ ಇವಿಎಂ ಮಷಿನ್ ಕೈ ಕೊಟ್ಟಿದ್ದರಿಂದ ಕೂಡಲೇ ಚುನಾವಣಾ ಅಧಿಕಾರಿಗಳು ಬೇರೆಯೊಂದು ಮಷಿನ್ ಬದಲಾವಣೆ‌ ಮಾಡಿ ಮತ ಚಲಾಯಿಸಲು ಅನುಕೂಲ ಮಾಡಿದ್ದಾರೆ.

31 ಅಸೆಂಬ್ಲಿ, ವಯನಾಡು ಲೋಕಸಭೆ ಕ್ಷೇತ್ರಕ್ಕೂ ಉಪಚುನಾವಣೆ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಜತೆಗೆ ದೇಶದ ಹತ್ತು ರಾಜ್ಯಗಳ 31 ವಿಧಾನಸಭಾ ಕ್ಷೇತ್ರ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಹುತೇಕ ಶಾಸಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಹಿನ್ನೆಲೆಯಲ್ಲಿ ಖಾಲಿಯಾದ ಸ್ಥಾನಕ್ಕೆ ನಡೆಯುತ್ತಿರುವ ಉಪ ಚುನಾವಣೆಗಳಾಗಿವೆ.

ರಾಜಸ್ಥಾನದ 7, ಪಶ್ಚಿಮಬಂಗಾಳದ 6, ಅಸ್ಸಾಮ್ 5, ಬಿಹಾರದ 4, ಕರ್ನಾಟಕದ 3, ಮಧ್ಯಪ್ರದೇಶದ 2 ಹಾಗೂ ಛತ್ತೀಸ್​ಘಡ, ಗುಜರಾತ್, ಕೇರಳ, ಮೇಘಾಲಯದ ತಲಾ ಒಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ವಯನಾಡು ಹಾಗೂ ರಾಯ್ಬರೇಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದ ರಾಹುಲ್ ಗಾಂಧಿ, ವಯನಾಡು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ಅಲ್ಲಿಯೂ ಇಂದು ಮತದಾನ ನಡೆಯುತ್ತಿದ್ದು, ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಉಪ ಚುನಾವಣೆಗಳ ಫಲಿತಾಂಶವು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಗಳ ಫಲಿತಾಂಶದ ಜತೆಯಲ್ಲೇ ನ.23ರಂದು ಪ್ರಕಟವಾಗಲಿದೆ.