ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡ ಮಹತ್ವದ ಯೋಜನೆ ಚಂದ್ರಯಾನ-3 ಆ.23ರಂದು ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಯಶಸ್ವಿಯಾಗಿದೆ. ಇದೀಗ ಆ ದಿನವನ್ನು ಅಂದರೆ 'ಆ.23 ಇಸ್ರೋ ದಿನ' ಎಂದು ಘೋಷಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ಕುರಿತು ಚೇಂಜ್.ಆರ್ಗ್ನಲ್ಲಿ ಮಿಹಿರ್ ಸಿಂಗ್ ಎಂಬವರು ಬೇಡಿಕೆ ಇಟ್ಟಿದ್ದು, ಹಲವಾರು ಮಂದಿ ಅದಕ್ಕೆ ಸಹಿ ಮಾಡುವ ಮೂಲಕ ಬೆಂಬಲ ಸೂಚಿಸಲಾರಂಭಿಸಿದ್ದಾರೆ. ಇಸ್ರೋ ವಿಜ್ಞಾನಿಗಳು ಅಮೋಘ ಸಾಧನೆಯನ್ನು ಸಂಭ್ರಮಿಸಿ ಗೌರವಿಸಲು ಆ ದಿನವನ್ನು ಇಸ್ರೋ ದಿನ ಎಂದು ಘೋಷಣೆ ಮಾಡಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.
ಇದೊಂದು ಸ್ಮರಣೀಯ ದಿನ. ನಮ್ಮ ಭವಿಷ್ಯದ ಪೀಳಿಗೆಯು ಹಿಂದಿರುಗಿ ನೋಡಲು ಮತ್ತು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪರಿಶ್ರಮದಿಂದ ಯಾವುದೇ ಮಿತಿಯಿಲ್ಲ ಎಂದು ತಿಳಿಯಲು ಈ ದಿನ ನಿದರ್ಶನ ಎಂಬುದಾಗಿ ಅವರು ಉಲ್ಲೇಖಿಸಿದ್ದಾರೆ.