ನ್ಯೂಸ್

VIDEO| ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರನ ಮೇಲೆ ಮೊಟ್ಟೆ ಎಸೆತ

ಅಮರಾವತಿ: ತೆಲುಗು ದೇಶಂ ಪಕ್ಷ(TDP)ದ ಮುಖ್ಯಸ್ಥ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​ ನೇತೃತ್ವದಲ್ಲಿ ನಡೆಯುತ್ತಿರುವ ಯುವ ಗಲಮ್ ಪಾದಯಾತ್ರೆಯನ್ನು ಗುರಿಯಾಗಿಸಿ ಕೆಲವು ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದಾರೆ.

ಗುರುವಾರ ಸಂಜೆ ಪಾದಯಾತ್ರೆಯು ಕಡಪಾ ಜಿಲ್ಲೆಯ ಪ್ರದ್ದಟೂರಿನ ರಿಲಯನ್ಸ್​ ಪೆಟ್ರೋಲ್​ ಬಂಕ್​ ಬಳಿ ಆಗಮಿಸಿದ ವೇಳೆ ಘಟನೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಅಶಾಂತಿಯ ವಾತವರಣ ನಿರ್ಮಾಣವಾಗಿತ್ತು.

ಮೊಟ್ಟೆ ಎಸೆತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ YSRCP ಹಾಗೂ TDP ನಾಯಕರ ನಡುವೆ ಕೆಸರೆರಚಾಟ ಶುರುವಾಗಿದ್ದು, ಇದು ಆಡಳಿತರೂಢ ಪಕ್ಷದವರ ಕೃತ್ಯ ಎಂದು ವಿಪಕ್ಷದ ಸದಸ್ಯರು ಆರೋಪಿಸಿದ್ದಾರೆ.

ನಾರಾ ಲೋಕೇಶ್​ ಹಾಗೂ ಅವರ ಭದ್ರತಾ ತಂಡದ ಮೇಲೆ ಮೊಟ್ಟೆ ಎಸೆದಿದ್ದನ್ನು ಕಂಡು ಕಾರ್ಯಪ್ರವೃತ್ತರಾದ ಟಿಡಿಪಿ ಕಾರ್ಯಕರ್ತರು ವೈಎಸ್​ಆರ್​ ಕಾಂಗ್ರೆಸ್​ ಪಕ್ಷಕ್ಕೆ ಸೇರಿದ ಇಬ್ಬರು ಯುವಕರನ್ನು ಸೆರೆ ಹಿಡಿದಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತ್ತೋಟಿಗೆ ತರಲು ಯತ್ನಿಸಿದ್ದರು ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.