ನ್ಯೂಸ್

ಜಾರ್ಖಂಡ್​ ಸಿಎಂ ಸ್ಥಾನಕ್ಕೆ ಚಂಪೈ ಸೊರೇನ್​ ರಾಜೀನಾಮೆ; ನೂತನ ಮುಖ್ಯಮಂತ್ರಿಯಾಗಿ ಹೇಮಂತ್​ ಸೊರೇನ್​ ಆಯ್ಕೆ

ರಾಂಚಿ: ಮಹತ್ವದ ಬೆಳವಣಿಗೆ ಒಂದರಲ್ಲಿ ಜಾರ್ಖಂಡ್​ ಮುಖ್ಯಮಂತ್ರಿ ಸ್ಥಾನಕ್ಕೆ ಚಂಪೈ ಸೊರೇನ್​ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿಯಾಗಿ ಹೇಮಂತ್​ ಸೊರೇನ್​ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

ರಾಜ್ಯಪಾಲರಿಗೆ ಚಂಪೈ ಸೊರೇನ್ ರಾಜೀನಾಮೆ ಪತ್ರ ನೀಡಿದ್ದು, ಮಾಜಿ ಮುಖ್ಯಮಂತ್ರಿ, ಜಾರ್ಖಂಡ್​ ಮುಕ್ತಿ ಮೋರ್ಚಾದ ಕಾರ್ಯಾಕಾರಿ ಅಧ್ಯಕ್ಷ ಹೇಮಂತ್​ ಸೊರೇನ್​ ನೂತನ ಸರ್ಕಾರವನ್ನು ರಚಿಸಲಿದ್ದಾರೆ. ಜೆಎಂಎಂ ಹಾಗೂ ಕಾಂಗ್ರೆಸ್​ ನೇತೃತ್ವದ ಸಮ್ಮಿಶ್ರ ಸರ್ಕಾರ ಜಾರ್ಖಂಡ್​ನಲ್ಲಿ ಅಧಿಕಾರದಲ್ಲಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಜಾರ್ಖಂಡ್​ ಮುಖ್ಯಮಂತ್ರಿಯಾಗಿದ್ದ ಹೇಮಂತ್​ ಸೊರೇನ್​ರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು. ಜಾರಿ ನಿರ್ದೇಶನಾಲಯ ಬಂಧಿಸುವ ಮೊದಲು ಹೇಮಂತ್ ಸೊರೇನ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಇದೀಗ ಮತ್ತೊಮ್ಮೆ ಜಾರ್ಖಂಡ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮುಂದಿನ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದು, ಅಧಿಕಾರಕ್ಕಾಗಿ ಬಿಜೆಪಿ, ಜೆಎಂಎಂ-ಕಾಂಗ್ರೆಸ್​ ಪಕ್ಷ ಅಧಿಕಾರಕ್ಕಾಗಿ ಸೆಣಸಾಡಲಿದೆ. ಹೇಮಂತ್ ಸೊರೆನ್ ಅವರನ್ನು ತನ್ನ ಮುಖವಾಗಿಟ್ಟುಕೊಂಡು ಚುನಾವಣೆ ಎದುರಿಸಲು ಜೆಎಂಎಂ ನೋಡುತ್ತಿದೆ. ಆದರೆ ಚಂಪೈ ಸೊರೇನ್ ಅವರನ್ನು ಬದಲಾವಣೆಯ ಲಾಭವನ್ನು ಪಡೆಯಲು ಬಿಜೆಪಿ ಮುಂದಾಗಿದೆ.