ತಿರುವನಂತಪುರಂ: ಸೋಮವಾರ (ಅ 27) ಚುನಾವಣಾ ಆಯೋಗ ಘೋಷಿಸಿರುವ ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿರ್ಧಾರಕ್ಕೆ, ವಿಪಕ್ಷಗಳ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತಿದ್ದು, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸೇರಿದಂತೆ, ಅನೇಕರು ಈ ನಡೆಯನ್ನು ಟೀಕಿಸಿದ್ದರು, ಸದ್ಯ ಅದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧ್ವನಿಗೂಡಿಸಿದ್ದಾರೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ವಿಜಯನ್, ಇದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಗಂಭೀರ ಸವಾಲು ಎಂದು ಕರೆದಿದ್ದಾರೆ. ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಗಳ ಬದಲಿಗೆ, ಕಳೆದ ಇಪ್ಪತ್ತು ವರ್ಷದ ಹಿಂದಿನ ಮತದಾರರ ಪಟ್ಟಿಗಳನ್ನು ಆಧರಿಸಿ ಪರಿಷ್ಕರಣೆ ಮಾಡುವ ಚುನಾವಣಾ ಆಯೋಗದ ಕ್ರಮವು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು 1960 ರ ಮತದಾರರ ನೋಂದಣಿ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.
ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವುದರಿಂದ, ಈಗ ವಿಶೇಷ ತೀವ್ರ ಪರಿಷ್ಕರಣೆ ನಡೆಸುವುದು ಅಪ್ರಾಯೋಗಿಕ ಎಂದು ರಾಜ್ಯ ಚುನಾವಣಾ ಅಧಿಕಾರಿ ಈಗಾಗಲೇ ಆಯೋಗಕ್ಕೆ ತಿಳಿಸಿದ್ದಾರೆ ಎನ್ನುವ ವಿಷಯವನ್ನು ಬಹಿರಂಗಪಡಿಸಿದ ವಿಜಯನ್, ಈ ಹಂತದಲ್ಲಿ ಅವರ ಎಚ್ಚರಿಕೆಗಳ ಹೊರತಾಗಿಯೂ, ಎಸ್‌ಐಆರ್ ನಡೆಸುವುದೇ ಆದರೆ, ಈ ಕ್ರಮದ ಹಿಂದಿನ ಉದ್ದೇಶದ ಬಗ್ಗೆ ಅನುಮಾನಗಳನ್ನು ಹುಟ್ಟಿಕೊಳ್ಳುವುದು ಸಹಜ ಎಂದರು.
ಬಿಹಾರದಲ್ಲಿ ಈ ಹಿಂದೆ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಉಲ್ಲೇಖಿಸಿದ ವಿಜಯನ್, ಅಲ್ಲಿ ಸುಮಾರು 65 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ, ಈ ಕ್ರಮವು ಸಂವಿಧಾನದ 326 ನೇ ವಿಧಿಯ ಅಡಿಯಲ್ಲಿ ನಾಗರಿಕರ ಸಾರ್ವತ್ರಿಕ ಮತದಾನದ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ನಾಗರಿಕರ ಮೂಲಭೂತ ಹಕ್ಕಾಗಿರುವ ಮತದಾನದ ಹಕ್ಕನ್ನು ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ, ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಜಾರಿಗೆ ತರಲು SIR ಪ್ರಕ್ರಿಯೆಯು ಸುತ್ತುವರೆದ ಮಾರ್ಗವಾಗಬಹುದು, ಈ ಹಿಂದೆ ಮಾಡಲಾದ ಇದೇ ರೀತಿಯ ಆರೋಪಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನಿರಾಕರಿಸಿಲ್ಲ ಎಂದರು.
ಇದನ್ನೂ ಓದಿ:77 ನೇ ವಯಸ್ಸಿನಲ್ಲೂ ಫುಲ್ ಫಿಟ್: ಈ ಅಂಶಗಳನ್ನು ಅನುಸರಿಸುತ್ತಾರಂತೆ ಬಾಲಿವುಡ್ ಡ್ರೀಮ್ ಗರ್ಲ್ Bollywood
ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ನಿರ್ಧಾರಗಳಿಂದ ದೂರವಿರಬೇಕು, ಸಾಂವಿಧಾನಿಕ ಸಂಸ್ತೆಗಳು ಕೇಂದ್ರದಲ್ಲಿ ಆಡಳಿತ ನಡೆಸುವವರ ಕೈಗೊಂಬೆಗಳಾಗಬಾರದು, ಎಸ್‌ಐಆರ್ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಏಕೈಕ ರಾಜ್ಯ ಕೇರಳ. ಎರಡನೇ ಹಂತದ ಪರಿಷ್ಕರಣಾ ಪ್ರಕ್ರಿಯೆಯ ವಿರುದ್ಧ ಪ್ರಜಾಪ್ರಭುತ್ವವನ್ನು ರಕ್ಷಿಸಲು ಆಸಕ್ತಿ ಹೊಂದಿರುವ ಎಲ್ಲರೂ ಒಂದಾಗಬೇಕೆಂದು ವಿಜಯನ್ ಕರೆ ನೀಡಿದರು.
2026 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನವೆಂಬರ್ ಮತ್ತು ಫೆಬ್ರವರಿ ನಡುವೆ SIR ನಡೆಸಲಾಗುವುದು ಎಂದು ಚುನಾವಣಾ ಆಯೋಗ ಸೋಮವಾರ ಘೋಷಿಸಿತ್ತು.(ಏಜೆನ್ಸೀಸ್)