ನವದೆಹಲಿ; ಮುಂಬರುವ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳಿಗಾಗಿ ನೇಮಕಗೊಂಡ ಸಚಿವರ ಗುಂಪು (GOM) ಎರಡು GST ಸ್ಲ್ಯಾಬ್‌ಗಳ ಪ್ರಸ್ತಾಪವನ್ನು ಬೆಂಬಲಿಸಿದೆ. ಜೊತೆಗೆ 12% ಮತ್ತು 28% ತೆರಿಗೆ ದರಗಳನ್ನು ರದ್ದುಗೊಳಿಸಲು ಶಿಫಾರಸು ಮಾಡಿದೆ. ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಧ್ಯಕ್ಷತೆಯ ಆರು ಸದಸ್ಯರ ಗುಂಪು (GOM), ಪ್ರಸ್ತುತ ನಾಲ್ಕು ದರ ರಚನೆಯಾದ 5, 12, 18, ಮತ್ತು 28% ಅನ್ನು ಎರಡು ದರಗಳೊಂದಿಗೆ ಬದಲಾಯಿಸುವ ಯೋಜನೆಯನ್ನು ಒಪ್ಪಿಕೊಂಡಿದೆ.
ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಪಶ್ಚಿಮ ಬಂಗಾಳ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ, ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಈ ಸಮಿತಿಯ ಸದಸ್ಯರಾಗಿರುತ್ತಾರೆ.
ಹೊಸ ದರ ಸ್ಲ್ಯಾಬ್‌ಗಳು ಅರ್ಹ ಸರಕುಗಳು ಮತ್ತು ಸೇವೆಗಳಿಗೆ 5% ಮತ್ತು ಪ್ರಮಾಣಿತ ವಸ್ತುಗಳಿಗೆ 18% ಆಗಿರುತ್ತವೆ. ಸರಕುಗಳ ಸಣ್ಣ ಪಟ್ಟಿಯಲ್ಲಿ 40% ರಷ್ಟು ಹೆಚ್ಚಿನ ದರ ಲೆವಿ ಉಳಿಯುತ್ತದೆ. 'ತೆರಿಗೆ ದರ ಕುರಿತು ಕೇಂದ್ರದ ಎರಡೂ ಪ್ರಸ್ತಾವನೆಗಳನ್ನು GOM ಅಂಗೀಕರಿಸಿದೆ ಎಂದು ಸಭೆಯ ಬಳಿಕ ಸಾಮ್ರಾಟ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: 'ಹಾಸಿಗೆಗಳು ಮಲಗಲು ಮಾತ್ರ'; ಪತ್ನಿ ಪ್ರಿಯಾಂಕಾ ಜತೆಗಿನ ಬೆಡ್ರೂಮ್ ಸೀಕ್ರೆಟ್ ಹರಿಬಿಟ್ಟ ನಿಕ್ ಜೋನಾಸ್| Nick Jonas
ಇನ್ನೂ ಈ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿಕ್ರಿಯಿಸಿದ್ದು, ಇದು ಸಾಮಾನ್ಯ ಜನರು, ರೈತರು, ಮಧ್ಯಮ ವರ್ಗ ಮತ್ತು ಎಂಎಸ್‌ಎಂಇಗಳಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಜೊತೆಗೆ ಸರಳೀಕೃತ, ಪಾರದರ್ಶಕ ಮತ್ತು ಬೆಳವಣಿಗೆ ಆಧಾರಿತ ತೆರಿಗೆ ಆಡಳಿತವನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗುವ ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮಾ ಪ್ರೀಮಿಯಂಗಳ ಮೇಲೆ ಶೂನ್ಯ ತೆರಿಗೆಗೆ ಹೆಚ್ಚಿನ ರಾಜ್ಯಗಳು ಒಪ್ಪಿಕೊಂಡಿವೆ ಎಂದು ಸಭೆಯ ನಂತರ ಸಾಮ್ರಾಟ್ ಚೌಧರಿ ತಿಳಿಸಿದ್ದಾರೆ. ಜೀವ ವಿಮಾ ಮತ್ತು ವೈಯಕ್ತಿಕ ಆರೋಗ್ಯ ಪಾಲಿಸಿಗಳಿಗೆ ಸಂಪೂರ್ಣ ವಿನಾಯಿತಿಗೆ ಸರ್ಕಾರ ಬೆಂಬಲ ನೀಡಿದೆ. ವಿಮೆಯ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಸಿದರೆ ಸುಮಾರು 10,000 ಕೋಟಿ ಆದಾಯ ನಷ್ಟವಾಗಬಹುದು ಎಂದು ಕೆಲ ರಾಜ್ಯಗಳ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
(ಏಜೆನ್ಸೀಸ್)