ನವದೆಹಲಿ: ಕರೊನಾ ಪಿಡುಗು ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಇರುವ ಕೇಂದ್ರ ಮತ್ತು ರಾಜ್ಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೆ ಮುಂದಿನ 5 ವರ್ಷಗಳವರೆಗೆ 15 ಸಾವಿರ ಕೋಟಿ ರೂ. ನೆರವು ನೀಡಲು ನಿರ್ಧರಿಸಿದೆ.
ಕೇಂದ್ರ ಸರ್ಕಾರ ಬುಧವಾರ ಈ ನಿರ್ಧಾರ ಕೈಗೊಂಡಿದ್ದು, 15 ಸಾವಿರ ಕೋಟಿ ರೂ.ಗಳನ್ನು ಎಲ್ಲ ರಾಜ್ಯಗಳಿಗೂ ಸಮನಾಗಿ ಹಂಚಿ ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಿದೆ. ಕೋವಿಡ್ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸನ್ನದ್ಧತೆ ಪ್ಯಾಕೇಜ್ (ಕೋವಿಡ್-19 ಎಮರ್ಜೆನ್ಸಿ ರೆಸ್ಪಾನ್ಸ್ ಆ್ಯಂಡ್ ಹೆಲ್ತ್ ಸಿಸ್ಟಂ ಪ್ರಿಪೇರ್ಡ್ನೆಸ್ ಪ್ಯಾಕೇಜ್) ಎಂಬ ಹೆಸರಿನ ಈ ಪ್ಯಾಕೇಜ್ ಅನ್ನು 2020 ಜನವರಿಯಿಂದ 2020 ಜೂನ್, 2020ರ ಜುಲೈನಿಂದ 2021ರ ಮಾರ್ಚ್ ಮತ್ತು 2021ರ ಏಪ್ರಿಲ್ನಿಂದ 2024ರ ಮಾರ್ಚ್ವರೆಗೆ ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್ 19 ಆಸ್ಪತ್ರೆಗಳ ಅಭಿವೃದ್ಧಿ, ಐಸಿಯುಗಳ ಅಭಿವೃದ್ಧಿ ಮತ್ತು ಆಕ್ಸಿಜನ್ ಸಿಲಿಂಡರ್ಗಳ ವ್ಯವಸ್ಥೆಗೆ ಈ ನಿಧಿಯ ಹಣವನ್ನು ಬಳಸಬಹುದಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕರು ಹೊರಡಿಸಿರುವ ಈ ಆದೇಶದ ಪ್ರಕಾರ ಈ ನಿಧಿಯ ಅನುದಾನವನ್ನು ಆಸ್ಪತ್ರೆಗಳು ಮತ್ತು ಆಂಬುಲೆನ್ಸ್ಗಳನ್ನು ಸೋಂಕುನಿವಾರಕ ದ್ರಾವಣ ಸಿಂಪಡಿಸುವಿಕೆ, ಆಸ್ಪತ್ರೆಗಳಿಗೆ ಅಗತ್ಯವಾದ ವಸ್ತುಗಳ ಖರೀದಿ, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮತ್ತು ಎನ್95 ಮಾಸ್ಕ್ಗಳ ಖರೀದಿ, ಔಷಧಗಳ ಖರೀದಿ ಮತ್ತು ಜೈವಿಕ ಭದ್ರತೆಯ ಸಿದ್ಧತೆಗೆ ಬಳಸಬಹುದಾಗಿದೆ.