ನ್ಯೂಸ್

ಅನ್ನಭಾಗ್ಯ ಯೋಜನೆ: ಹೆಚ್ಚುವರಿ ಅಕ್ಕಿಗಾಗಿ ಕೇಂದ್ರದ ಮೊರೆ ಹೋಗಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ನಿರಾಸೆ

ದೆಹಲಿ/ಬೆಂಗಳೂರು: ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿಗಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ನಿರಾಸೆಯಾಗಿದೆ. ಅಕ್ಕಿಯನ್ನು ಕೊಡುವುದಿಲ್ಲ ಎಂದು ಕೇಂದ್ರ ಆಹಾರ ಸಚಿವ ಪಿಯುಷ್​ ಗೋಯೆಲ್​ ನೇರವಾಗಿ ಹೇಳಿದರು ಎಂದು ರಾಜ್ಯ ಆಹಾರ ಸಚಿವ ಕೆ.ಎಚ್​. ಮುನಿಯಪ್ಪ ತಿಳಿಸಿದ್ದಾರೆ.

ಅಕ್ಕಿ ಕೊಡಲು ನಿರಾಕರಿಸಿದರು

ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಇಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದೆ. ಅವರು ಅಕ್ಕಿ ಕೊಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದ್ದಾರೆ. ನಿಮ್ಮ ಬಳಿ ಸ್ಟಾಕ್ ಇದೆ. ದ್ವಿಗುಣ ಪ್ರಮಾಣದಲ್ಲಿ ಇದೆ. ಏಕೆ ಅಕ್ಕಿ ಕೊಡುವುದಿಲ್ಲ ಎಂದು ಕೇಳಿದೆ. ಕೇಂದ್ರದ ದರ ನೀಡಲೂ ನಾವು ರೆಡಿ ಇದ್ದೀವಿ ಅಂತಾನೂ ಹೇಳಿದೆ. ಆದರೆ, ಬೇರೆ ಬೇರೆ ಕಾರ್ಯಕ್ರಮಕ್ಕೆ ನೀಡಲು ಬೇಕಾಗುತ್ತದೆ ಎಂದು ಅಕ್ಕಿ ಕೊಡಲು ನಿರಾಕರಿಸಿದರು ಎಂದು ಮುನಿಯಪ್ಪ ತಿಳಿಸಿದರು.

ಬೇರೆ ದಾರಿಯನ್ನು ನೋಡಬೇಕಿದೆ

ಇದು ರಾಜಕೀಯ ದುರುದ್ದೇಶದ ನಿಲುವು. ಸ್ಟಾಕ್ ಇದ್ದರೂ ಕೊಡಲ್ಲ ಅನ್ನೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಮುನಿಯಪ್ಪ, ಇದು ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಬರುತ್ತದೆ. ಈ ಕಾಯ್ದೆ ಮಾಡಿದ್ದೆ ಹಿಂದಿನ ಯುಪಿಎ ಸರ್ಕಾರ. ಆದರೆ ಕೇಂದ್ರ ತನ್ನ ನೀತಿಯನ್ನು ಬದಲಿಸಿದೆ. ಈಗ ಅಕ್ಕಿ ಇಲ್ಲ ಎಂದು ಹೇಳುತ್ತಿದೆ. ಹೀಗಾಗಿ ನಾವು ಬೇರೆ ದಾರಿಯನ್ನು ನೋಡಬೇಕಿದೆ. ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕಾರಣ ಮಾಡುತ್ತಿದೆ ಎಂದು ಮುನಿಯಪ್ಪ ಅವರು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯು ಪ್ರತಿ ವ್ಯಕ್ತಿ 10 ಕೆಜಿ ಅಕ್ಕಿ ನೀಡುವ ಯೋಜನೆಯಾಗಿದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರೋ ಮುನ್ನ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಸಹ ಒಂದು. ಈಗಾಗಲೇ ರಾಜ್ಯದಲ್ಲಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೀಗ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಹೊಂದಿಸಲು ಸರ್ಕಾರ ಹರಹಸಾಹಸ ಪಡುತ್ತಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿರುವುದರಿಂದ ಇದೀಗ ರಾಜ್ಯ ಸರ್ಕಾರ ಬೇರೆ ರಾಜ್ಯಗಳ ಮೊರೆ ಹೋಗಬೇಕಿದೆ. (ದಿಗ್ವಿಜಯ ನ್ಯೂಸ್​)