ನವದೆಹಲಿ: ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಮನವಿಗಳನ್ನು ವಿಸ್ತೃತವಾಗಿ ಪರಿಶೀಲಿಸಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಭಾರತ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಉಭಯ ಲಸಿಕೆಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಚಿವಾಲಯ, ಈ ಪ್ರಕ್ರಿಯೆಯ ವಿವರವಾದ ಮಾಹಿತಿಯನ್ನು ಪ್ರಕಟಿಸಿದೆ. ರೋಗ ನಿರೋಧಕತೆ, ಪರಿಣಾಮ ಮುಂತಾದ ಅಂಶಗಳನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಅವುಗಳ ತುರ್ತು ಬಳಕೆಗೆ ಕೆಲವು ಷರತ್ತುಗಳೊಂದಿಗೆ ಸಮ್ಮತಿಸಲಾಗಿದೆ ಎಂದು ತಿಳಿಸಿದೆ. ಸುರಕ್ಷಿತ ಹಾಗೂ ಜಾಗತಿಕವಾಗಿ ಮಾನ್ಯವಾಗಿರುವ ವಿಧಾನಗಳನ್ನು ಅನುಸರಿಸಿ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಕೋವಿಶೀಲ್ಡ್ ಪ್ರಮುಖ ಲಸಿಕೆ: ಭಾರತದಲ್ಲಿ ಕೋವಿಡ್-19 ವಿರುದ್ಧದ ಸಮರದಲ್ಲಿ ಸೆರಂ ಉತ್ಪಾದನೆಯ ಕೋವಿಶೀಲ್ಡ್ ಲಸಿಕೆಯೇ ಪ್ರಮುಖ ಲಸಿಕೆಯಾಗಿರುತ್ತದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್್ಸ) ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಇನ್ನೂ ಕ್ಲಿನಿಕಲ್ ಪರೀಕ್ಷೆ ಹಂತದಲ್ಲಿರುವ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಮುಂದಿನ ದಿನಗಳಲ್ಲಿ ‘ಬ್ಯಾಕಪ್’ ಲಸಿಕೆ ಆಗಬಹುದಾಗಿದೆ ಅಷ್ಟೆ ಎಂದು ಸಂದರ್ಶನವೊಂದರಲ್ಲಿ ಅವರು ಅಭಿಪ್ರಾಯ ಪಟ್ಟರು.
ಯಾರಿಗೆ ಮೊದಲು ಲಸಿಕೆ?: ಆದ್ಯತಾ ವಲಯದ 30 ಕೋಟಿ ಜನರಿಗೆ ಪ್ರಾಶಸ್ಱಕ್ಕೆ ಅನುಗುಣವಾಗಿ ಮೊದಲ ಹಂತದಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದೆಂದು ಆರೋಗ್ಯ ಸಚಿವ ಹರ್ಷವರ್ಧನ್ ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಗಳ ನೌಕರರು, ಕರೊನಾ ವಿರುದ್ಧದ ಹೋರಾಡುತ್ತಿರುವ ಮುಂಚೂಣಿ ಕಾಯಕರ್ತರು ಮತ್ತು 50 ವರ್ಷ ಮೇಲ್ಪಟ್ಟವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದಿದ್ದಾರೆ.
ಡಬ್ಲ್ಯೂಎಚ್ಒ ಸ್ವಾಗತ: ಎರಡು ಲಸಿಕೆಗಳಿಗೆ ಭಾರತ ಅನುಮೋದನೆ ನೀಡಿರುವುದರಿಂದ ಕೋವಿಡ್ ವಿರುದ್ಧ ಹೋರಾಡಲು ಹೆಚ್ಚಿನ ಬಲ ಸಿಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಅಭಿಪ್ರಾಯಪಟ್ಟಿದೆ. ಡಿಸಿಜಿಐ ಅನುಮೋದನೆಯನ್ನು ಡಬ್ಲ್ಯೂಎಚ್ಒ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸ್ವಾಗತಿಸಿದ್ದಾರೆ.
ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ದೊರಕಿರುವುದು ಭಾರತದ ವ್ಯಾಕ್ಸಿನ್ ಉದ್ಯಮದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇತರ ದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು (ಎಂಎನ್ಸಿ) ಸಂಶೋಧಿಸಿ ಅಭಿವೃದ್ಧಿಪಡಿಸಿದ ಲಸಿಕೆಗಳನ್ನೇ ಸಾಮಾನ್ಯವಾಗಿ ಭಾರತೀಯ ಕಂಪನಿಗಳು ಉತ್ಪಾದಿಸುತ್ತವೆ. ಆದರೆ, ಕೊವ್ಯಾಕ್ಸಿನ್ ಸಂಪೂರ್ಣವಾಗಿ ದೇಶೀಯ ಲಸಿಕೆಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಸಿಆರ್) ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿ) ವಿಜ್ಞಾನಿಗಳು ಕರೊನಾ ಸೋಂಕಿತ ಭಾರತೀಯ ರೋಗಿಯೊಬ್ಬರಿಂದ ಕರೊನಾ ವೈರಸ್ ಅಂಶಗಳನ್ನು ಪ್ರತ್ಯೇಕಿಸಿ ಎಲ್ಲ ಪ್ರಕ್ರಿಯೆಗಳನ್ನು ದೇಶೀಯವಾಗಿಯೇ ಮಾಡಿದ್ದಾರೆ. ಸೂತ್ರೀಕರಣ, ಪ್ರಾಣಿಗಳ ಮೇಲಿನ ಅಧ್ಯಯನ ಮತ್ತು ಮಾನವರ ಮೇಲೆ ಪರೀಕ್ಷೆ ಇವೇ ಮೊದಲಾದವು ಈ ಪ್ರಕ್ರಿಯೆಯಲ್ಲಿ ಒಳಗೊಂಡಿದ್ದವು. ? 800ಕ್ಕೂ ಅಧಿಕ ಜನರ ಮೇಲೆ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ? 22,500 ಜನರ ಮೇಲೆ ಮೂರನೇ ಹಂತದ ಪ್ರಯೋಗ ಚಾಲ್ತಿಯಲ್ಲಿದ್ದು, ಇದರ ಪರಿಣಾಮ ಸದ್ಯದಲ್ಲೇ ಸಿಗುವ ನಿರೀಕ್ಷೆ ಇದೆ ? ಅಂದಾಜು ಬೆಲೆ ಪ್ರತಿ ಡೋಸ್ಗೆ 100 ರೂಪಾಯಿ.
ವೈರಸ್ ಬಳಸಿಯೇ ಔಷಧ ಅಭಿವೃದ್ಧಿ ವಿಧಾನವನ್ನು ಬ್ರಿಟನ್ನ ಆಕ್ಸ್ಫರ್ಡ್ ಯೂನಿವರ್ಸಿಟಿ ಹಾಗೂ ಆಸ್ಟ್ರಾಜೆನಿಕಾ ಕಂಪನಿ ಸಂಶೋಧಿಸಿದೆ. ಚಿಂಪಾಜಿಯ ಸಾಮಾನ್ಯ ಶೀತದ ವೈರಸ್ನ ದುರ್ಬಲ ಆವೃತ್ತಿಯನ್ನೂ ಇದರಲ್ಲಿ ಬಳಸಲಾಗಿದೆ. ಭಾರತದಲ್ಲಿ ಪ್ರಯೋಗ ಹಾಗೂ ಉತ್ಪಾದನೆ ಪಾಲುದಾರ ಸಂಸ್ಥೆ ಸೇರಂ ಇನ್ಸ್ಟಿಟ್ಯೂಟ್ ಆಗಿದೆ. ಇದಕ್ಕೆ ಕೋವಿಶೀಲ್ಡ್ ಎಂಬ ಹೆಸರು ಕೊಡಲಾಗಿದೆ. ? 23,745 ವ್ಯಕ್ತಿಗಳ ಮೇಲೆ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆ. ? 1,600 ವ್ಯಕ್ತಿಗಳ ಮೇಲೆ 2ನೇ ಹಂತದ ಪ್ರಯೋಗ ? ಅಂದಾಜು ಬೆಲೆ ಪ್ರತಿಡೋಸ್ಗೆ 200-1000 ರೂಪಾಯಿ.