ಮುಂಬೈ: ಉಕ್ಕು ಮತ್ತು ಸಿಮೆಂಟ್ ಉದ್ಯಮಗಳು ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದ್ದು, ಇದರಿಂದ ದೇಶಕ್ಕೆ ಮತ್ತು ಅದರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಧಕ್ಕೆ ಆಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದಾರೆ.
ಐಇಸಿಆರ್ಪಿ 2025 ಸಮಾವೇಶದಲ್ಲಿ ಮಾತನಾಡಿದ ಅವರು, ‘ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಈ ಎರಡೂ ವಲಯಗಳು ಪ್ರಮುಖವಾಗಿದ್ದು, ಇವುಗಳಲ್ಲಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಒಗ್ಗಟ್ಟಾಗಿ ದೇಶದ ಹಿತವನ್ನು ಬಲಿ ಕೊಡುತ್ತಿವೆ. ಉಕ್ಕು, ಸಿಮೆಂಟ್ನ ಬೆಲೆ ಎಷ್ಟಿರಬೇಕೆಂಬುದನ್ನೂ ಈ ದುಷ್ಟಕೂಟವೇ ನಿರ್ಧರಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಕ್ಕು ಮತ್ತು ಸಿಮೆಂಟ್ ಕಂಪನಿಗಳ ಏಕಸ್ವಾಮ್ಯವನ್ನು ಕೊನೆಗಾಣಿಸಲು ಫೈಬರ್ ರೀಇನ್ಫೋರ್ಸ್ಡ್ ಪ್ಲಾಸ್ಟಿಕ್ (ಎಫ್ಆರ್ಪಿ) ಉತ್ತಮ ಪರ್ಯಾಯವಾಗಿದೆ. ಈ ವಲಯಕ್ಕೆ ಸಾಧ್ಯವಿರುವ ಎಲ್ಲ ಸಹಕಾರವನ್ನೂ ನೀಡಲು ಸಿದ್ಧನಿದ್ದೇನೆ. ಪರ್ಯಾಯವನ್ನು ಪ್ರಬಲಗೊಳಿಸುವುದಷ್ಟೇ ನನ್ನ ಉದ್ದೇಶವಾಗಿದೆ. ಆದರೆ ಎಫ್ಆರ್ಪಿ ಬೆಲೆಯನ್ನೂ ಕಡಿಮೆ ಮಾಡಬೇಕು. ಅಂತಿಮ ವೆಚ್ಚ ಶೇ. 20ರಿಂದ 25ರಷ್ಟು ಇಳಿಯಬೇಕು ಎಂದು ಗಡ್ಕರಿ ಆಗ್ರಹಿಸಿದರು.
ಎಫ್ಆರ್ಪಿ ವಲಯವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಸೂಕ್ತ ಕಚ್ಚಾ ವಸ್ತು ಗುರುತಿಸುವುದು, ಸ್ಥಳೀಯವಾಗಿಯೇ ಉತ್ಪಾದನೆ ಮಾಡುವುದು ಕೂಡ ಮುಖ್ಯ. ಮೂಲಸೌಕರ್ಯ, ವೈಮಾನಿಕ ಸೇವೆ, ಶಿಪ್ಪಿಂಗ್, ರಸ್ತೆ ನಿರ್ಮಾಣ, ಮೆಟ್ರೋ ರೈಲು ಮುಂತಾದ ಹಲವು ಕಡೆ ಎಫ್ಆರ್ಪಿ ಬಳಸಬಹುದಾಗಿದೆ ಎಂದರು.
ಹೈಡ್ರೋಜನ್ ಉತ್ಪಾದನೆಯ ವೆಚ್ಚವನ್ನು ಕೂಡ ಪ್ರತಿ ಕೆಜಿಗೆ ಒಂದು ಅಮೆರಿಕನ್ ಡಾಲರ್ಗೆ (ಸುಮಾರು 86 ರೂ.) ಇಳಿಸಬೇಕಾಗಿದೆ. ಈಗ ಅದು 300 ರೂ.ಗಿಂತ ಜಾಸ್ತಿ ಇದೆ. ಇದು ಸಾಧ್ಯವಾದರೆ ಭಾರತವು ಇಂಧನದ ರಫ್ತುದಾರ ದೇಶವಾಗಿ ಹೊರಹೊಮ್ಮುತ್ತದೆ. ವಾಹನೋದ್ಯಮದಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ಇನ್ನು ಐದು ವರ್ಷಗಳಲ್ಲಿ ಅದನ್ನು ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನಕ್ಕೆ ಒಯ್ಯುವ ಉದ್ದೇಶವಿದೆ ಎಂದು ವಿವರಿಸಿದರು.
ದೇಶದ ವಾಣಿಜ್ಯ ರಾಜಧಾನಿಯ ವಿವಿಧ ಸ್ಥಳಗಳಿಂದ ನವಿಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಪ್ರಯಾಣಿಕರನ್ನು ತಲುಪಿಸಲು 10 ಸಾವಿರ ವಾಟರ್ ಟ್ಯಾಕ್ಸಿಗಳನ್ನು ಸೇವೆಗೆ ಇಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಗಡ್ಕರಿ ಹೇಳಿದರು. ವಾಟರ್ ಟ್ಯಾಕ್ಸಿಗಳಿಂದಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ. ಈ ಕುರಿತು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜತೆ ಮಾತನಾಡಿದ್ದೇನೆ. ಮುಂದಿನ ವರ್ಷದ ಏಪ್ರಿಲ್ನಲ್ಲಿ ಹೊಸ ವಿಮಾನ ನಿಲ್ದಾಣ ಆರಂಭವಾಗಲಿದ್ದು, ಮೆಟ್ರೊ ರೈಲಿನ ಸಂಪರ್ಕ ಕಲ್ಪಿಸುವ ಪ್ರಯತ್ನವೂ ನಡೆಯುತ್ತಿದೆ ತಿಳಿಸಿದರು.