ತಮಿಳುನಾಡಿನ ತಿರುವಣ್ಣಾಮಲೈ ಬೆಟ್ಟದ ಮೇಲೆ ಕಾರ್ತಿಕ ದೀಪೋತ್ಸವ 
ನ್ಯೂಸ್

ಭಾರೀ ಭದ್ರತೆಯ ನಡುವೆ ಕಾರ್ತಿಕ ದೀಪೋತ್ಸವದ ಸಂಭ್ರಮ: ಲಕ್ಷಾಂತರ ಭಕ್ತರಿಗೆ ದಿವ್ಯ ದರ್ಶನ!| Karthigai Deepam

Karthigai Deepam: ಭಾರೀ ಭದ್ರತಾ ವ್ಯವಸ್ಥೆಯ ನಡುವೆ ತಮಿಳುನಾಡಿನ ತಿರುವಣ್ಣಾಮಲೈ ಮತ್ತು ತಿರುಪ್ಪರಂಕುಂದ್ರಂನಲ್ಲಿ ಮಂಗಳವಾರ ಸಾಂಪ್ರದಾಯಿಕ ಕಾರ್ತಿಕ ದೀಪೋತ್ಸವ ನೆರವೇರಿತು. ಭಕ್ತರ ಭಕ್ತಿಗೀತೆ, ಶಿವನಾಮ ಸ್ಮರಣೆ ಹಾಗೂ ಹರ್ಷೋದ್ಗಾರದ ನಡುವೆ ತಿರುವಣ್ಣಾಮಲೈ ಬೆಟ್ಟದ ಮೇಲೆ ಮತ್ತು ತಿರುಪ್ಪರಂಕುಂದ್ರಂನ ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ಸಂಪ್ರದಾಯದಂತೆ ದೀಪ ಬೆಳಗಿಸಲಾಯಿತು.

ತಿರುವಣ್ಣಾಮಲೈನಲ್ಲಿ ನಡೆದ ಕಾರ್ತಿಕ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ದೂರದ ಊರುಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನ ನಗರಿಗೆ ಹರಿದುಬಂದಿದ್ದರು. ಹರಕೆ ಹೊತ್ತಿದ್ದ ಅನೇಕ ಭಕ್ತರು ತಮ್ಮ ಹರಕೆ ತೀರಿಸುವ ಉದ್ದೇಶದಿಂದ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇನ್ನು ತಿರುಪ್ಪರಂಕುಂದ್ರಂನಲ್ಲಿ ಹಲವು ವರ್ಷಗಳಿಂದ ಸಂಪ್ರದಾಯವಾಗಿ ದೀಪ ಬೆಳಗಿಸಲಾಗುತ್ತಿರುವ ಉಚ್ಚಿಪಿಳ್ಳೈಯಾರ್ ಮಂಟಪದಲ್ಲೇ ಈ ಬಾರಿಯೂ ದೀಪ ಹಚ್ಚಲಾಯಿತು. ಈ ಮೂಲಕ ಎಂದಿನ ಸ್ಥಳದಲ್ಲೇ ಕಾರ್ತಿಕ ದೀಪೋತ್ಸವದ ಆಚರಣೆ ನಡೆಯಿತು.

ಇದನ್ನೂ ಓದಿ: ಒಂಟಿತನಕ್ಕೆ ಗುಡ್‌ಬೈ, ಪ್ರೀತಿಗೆ ಹಾಯ್! 75ರ ಅಜ್ಜನಿಗೆ 63ರ ವೃದ್ಧೆಯೇ ಬಾಳಸಂಗಾತಿ | Elderly Marriage

ತಿರುವಣ್ಣಾಮಲೈನಲ್ಲಿ ದೀಪ ಬೆಳಗಿದ ಬಳಿಕ ತಮಿಳುನಾಡಿನ ವಿವಿಧ ದೇವಸ್ಥಾನಗಳಲ್ಲೂ ದೀಪೋತ್ಸವ ಆಚರಿಸಲಾಯಿತು. ಜನರು ತಮ್ಮ ಮನೆಗಳಲ್ಲಿಯೂ ದೀಪಗಳನ್ನು ಬೆಳಗಿಸಿ ಕಾರ್ತಿಕ ದೀಪದ ಸಂಭ್ರಮದಲ್ಲಿ ಭಾಗಿಯಾದರು.