ಒಂಟಿತನಕ್ಕೆ ಗುಡ್‌ಬೈ, ಪ್ರೀತಿಗೆ ಹಾಯ್! 75ರ ಅಜ್ಜನಿಗೆ 63ರ ವೃದ್ಧೆಯೇ ಬಾಳಸಂಗಾತಿ | Elderly Marriage

Elderly Marriage
75ರ ಅಜ್ಜನಿಗೆ 63ರ ವಯಸ್ಸಿನ ವೃದ್ಧೆಯ ಜತೆ ಮದುವೆ
Published on: 

Elderly Marriage: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಹಿಮಾಚಲ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ. ಜೀವನದಲ್ಲಿ ಸಾಕಷ್ಟು ಕಷ್ಟ, ನೋವು ಮತ್ತು ಒಂಟಿತನ ಅನುಭವಿಸಿದ್ದ 75 ವರ್ಷದ ವೃದ್ಧ ಹಾಗೂ 63 ವರ್ಷದ ವೃದ್ಧೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ದಯೋಲಿ ಪ್ರದೇಶದ 'ಅಪ್ನಾ ಘರ್' ವೃದ್ಧಾಶ್ರಮದಲ್ಲಿ ವಾಸವಾಗಿರುವ ಕನ್ಹಯ್ಯಾ ಲಾಲ್ ಮತ್ತು ಸಬೀನಾ ಮದುವೆಯಾಗಲು ನಿರ್ಧರಿಸಿದ್ದಾರೆ. ನವೆಂಬರ್ 25ರಂದು ವೃದ್ಧಾಶ್ರಮದಲ್ಲೇ ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.

ಕನ್ಹಯ್ಯಾ ಲಾಲ್ ನೋವಿನ ಜೀವನ

75 ವರ್ಷದ ಕನ್ಹಯ್ಯಾ ಲಾಲ್ ಮಂಡಿ ಜಿಲ್ಲೆಯ ಥುನಾಗ್‌ನ ಜಂಜೆಹ್ಲಿ ಪ್ರದೇಶದವರು. ಪತ್ನಿಯೊಂದಿಗೆ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಅನಾರೋಗ್ಯದಿಂದ ಪತ್ನಿ ಮೃತಪಟ್ಟ ಬಳಿಕ ಅವರ ಜೀವನದಲ್ಲಿ ಒಂಟಿತನ ಆವರಿಸಿತು.

ಮಕ್ಕಳಿಲ್ಲದ ಕಾರಣ ತಮ್ಮ ಕೃಷಿ ಭೂಮಿಯನ್ನು ಸಹೋದರರಿಗೆ ವರ್ಗಾಯಿಸಿದ್ದರು. ಆದರೆ ನಂತರ ಕುಟುಂಬದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಯಿತು. ಸಂಬಂಧಿಕರಿಂದಲೂ ನೆರವು ಸಿಗದ ಕಾರಣ ಕಾಡಿನ ಗುಹೆಯೊಂದರಲ್ಲಿ ಆಶ್ರಯ ಪಡೆದಿದ್ದರು. 2022ರಲ್ಲಿ ಅವರನ್ನು ದಯೋಲಿಯ ಅಪ್ನಾ ಘರ್ ವೃದ್ಧಾಶ್ರಮಕ್ಕೆ ಕರೆತರಲಾಯಿತು. ಅಂದಿನಿಂದ ಅಲ್ಲಿಯೇ ವಾಸವಾಗಿದ್ದಾರೆ.

ಸಬೀನಾ ಬದುಕಿನಲ್ಲೂ ಕಷ್ಟದ ಪಯಣ

63 ವರ್ಷದ ಸಬೀನಾ ಮೂಲತಃ ಕೋಲ್ಕತ್ತಾದವರು. ಶಿಮ್ಲಾದ ಮಶೋಬ್ರಾ ಪ್ರದೇಶದಲ್ಲಿ ಪತ್ತೆಯಾಗಿದ್ದ ಅವರನ್ನು ಪೊಲೀಸರು ರಕ್ಷಿಸಿ ನಾರಿ ನಿಕೇತನಕ್ಕೆ ದಾಖಲಿಸಿದ್ದರು. ಅಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಇದ್ದರು ಎನ್ನಲಾಗಿದೆ. 2025ರಲ್ಲಿ ಅವರನ್ನು ಬಿಲಾಸ್‌ಪುರ ಜಿಲ್ಲೆಯ ದಯೋಲಿಯ ಅಪ್ನಾ ಘರ್ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಗಿತ್ತು. ಇದೇ ವೃದ್ಧಾಶ್ರಮದಲ್ಲಿ ಕನ್ಹಯ್ಯಾ ಲಾಲ್ ಪರಿಚಯವಾಯಿತು.

ಸ್ನೇಹದಿಂದ ಮದುವೆಯ ತನಕ

ಒಂದೇ ವೃದ್ಧಾಶ್ರಮದಲ್ಲಿ ವಾಸವಾಗಿದ್ದ ಇಬ್ಬರ ನಡುವೆ ನಿಧಾನವಾಗಿ ಸ್ನೇಹ ಬೆಳೆದಿದೆ. ದೈನಂದಿನ ಕೆಲಸಗಳಲ್ಲಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತಾ, ಕಷ್ಟದ ಸಮಯದಲ್ಲಿ ಆಸರೆಯಾಗುತ್ತಾ ಆತ್ಮೀಯತೆ ಹೆಚ್ಚಿಸಿಕೊಂಡಿದ್ದಾರೆ. ಜೀವನದಲ್ಲಿ ಒಂಟಿತನ ಮತ್ತು ಸಂಕಷ್ಟಗಳನ್ನು ಎದುರಿಸಿದ್ದ ಇಬ್ಬರೂ ಇನ್ನುಳಿದ ಬದುಕನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದ್ದಾರೆ. ಇವರ ಇಚ್ಛೆಯನ್ನು ತಿಳಿದುಕೊಂಡ ವೃದ್ಧಾಶ್ರಮದ ಸಂಸ್ಥಾಪಕ ಹಾಗೂ ವಕೀಲ ಪ್ರಕಾಶ್ ಬನ್ಸಾಲ್ ಮದುವೆಗೆ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ರಿಫೈನ್ಡ್ ಆಯಿಲ್ vs ಗಾಣದ ಎಣ್ಣೆ: ಆರೋಗ್ಯಕ್ಕೆ ಯಾವುದು ಬೆಸ್ಟ್? | Cooking Oil

ನಾಳೆಯೇ ಮದುವೆ ಸಂಭ್ರಮ

ಕನ್ಹಯ್ಯಾ ಲಾಲ್ ಮತ್ತು ಸಬೀನಾ ಮೊದಲು ಕೋರ್ಟ್ ಮದುವೆಯಾಗಲಿದ್ದು, ಬಳಿಕ ನಾಳೆ ಹಿಂದೂ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದೆ. ಮದುವೆಯ ನಂತರ ದಂಪತಿಯನ್ನು ನಲಗಢದ ಮತ್ತೊಂದು ವೃದ್ಧಾಶ್ರಮಕ್ಕೆ ಸ್ಥಳಾಂತರಿಸಿ, ಒಟ್ಟಿಗೆ ವಾಸಿಸಲು ವ್ಯವಸ್ಥೆ ಮಾಡಲಾಗುತ್ತದೆ. ಒಂಟಿತನದ ಬದುಕಿಗೆ ವಿದಾಯ ಹೇಳಿ ಹೊಸ ಜೀವನ ಆರಂಭಿಸಲು ಸಜ್ಜಾಗಿರುವ ಈ ಜೋಡಿಯ ನಿರ್ಧಾರ ಎಲ್ಲರ ಗಮನ ಸೆಳೆದಿದೆ.