ನ್ಯೂಸ್

ಗುರುಗಾಂವ್ ಕನ್ನಡ ಸಂಘದಲ್ಲಿ ಯುಗಾದಿ ಮಿಲನ ಸಂಭ್ರಮ

| ವರದಿ: ಚಂದ್ರಶೇಖರ ಜೋಳದರಾಶಿ

ದೆಹಲಿ ಎನ್​ಸಿಆರ್​ನ ಹರಿಯಾಣ ರಾಜ್ಯದಲ್ಲಿ ಗುರುಗ್ರಾಮ್​ ನಗರದ ಸೆಕ್ಟರ್ 43 ರಲ್ಲಿರುವ ಎಕ್ಷೆಲ್ಸಿಯರ್ ಅಮೆರಿಕನ್ ಸ್ಕೂಲ್​ನ ಆಡಿಟೋರಿಯಂನಲ್ಲಿ ದಿನಾಂಕ 14.04.2024ರಂದು ಗುರುಗಾಂವ್ ಕನ್ನಡ ಸಂಘದ ವತಿಯಿಂದ 21ನೇ ಯುಗಾದಿ ಸಾಂಸ್ಕೃತಿಕ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರೂ, ವ್ಯವಸ್ಥಾಪಕರೂ ಹಾಗು ಸಮಾಜ ಸೇವಕರಾದ ಶ್ರೀಮತಿ ಡಾ.ತೇಜಸ್ವಿನಿ ಅನಂತ್ ಕುಮಾರ್ ಅವರು ಮಾಡಿದರು. ಮುಖ್ಯ ಅತಿಥಿಗಳಾಗಿ ಸತ್ಯಪ್ರಕಾಶ್ ಆರ್. ಪಾಟೀಲ್, ಕಾರ್ಯನಿರ್ವಾಹಕ ಮುಖ್ಯಸ್ಥರು, ಸಿಎಸ್ಆರ್ ಹಾಗೂ ಹೋಂಡಾ ಇಂಡಿಯಾ ಫೌಂಡೇಶನ್, ಹೋಂಡಾ ಐಎಂಟಿ ಮಾನೇಸರ್ ಆಗಮಿಸಿದ್ದರು.

ಕನ್ನಡಿಗರ ಕಾರ್ಯಕ್ರಮಕ್ಕೆ ತಮ್ಮ ಬಿಡುವಿಲ್ಲದ ಕಾಲದಲ್ಲೂ ಸಮಯವನ್ನು ಮಾಡಿಕೊಂಡು ಹೊರನಾಡಿನಲ್ಲಿ ಕನ್ನಡಿಗರ ಮನಸುಗಳ ಜೊತೆಯಲ್ಲಿ ಬೆರೆಯಬೇಕು ಎಂದು ಅವರ ಪತಿ ದಿವಂಗತ ಶ್ರೀ ಅನಂತ್ ಕುಮಾರ್ ಯಾವ ರೀತಿ ಕನ್ನಡ ಜನರಿಗೆ ಉಸಿರಾಗಿದ್ದರು, ಕನ್ನಡ ಜನರನ್ನ ಪ್ರೀತಿಸುತ್ತಿದ್ದರು ಅದೇ ರೀತಿ ಅವರ ಶ್ರೀಮತಿ ಡಾ. ತೇಜಸ್ವಿನಿ ಅನಂತಕುಮಾರ್ ಅವರು ಸಹ ಕರ್ನಾಟಕದಿಂದ ಬಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡಿಗರ ಜೊತೆ ಬೆರೆತು ಮಾರ್ಗದರ್ಶನ ಮಾಡಿ ಎಲ್ಲರ ಮನಸ್ಸನ್ನು ಗೆದ್ದಂತಹ ಮಹಾನ್ ಅನ್ನದಾತೆ ಸಮಾಜವನ್ನು ಉತ್ತಮ ಬೆಳವಣಿಗೆಯ ಕಡೆ ತೆಗೆದುಕೊಂಡು ಹೋಗಲು ತಮ್ಮದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಅವರ ಕಾರ್ಯಗಳು,ನುಡಿಗಳು ಸ್ಪೂರ್ತಿದಾಯಕ, ಅವರು ಅದಮ್ಯ ಚೇತನ ಸಂಸ್ಥೆಯನ್ನು ಕಟ್ಟಿ, ಪ್ರತಿದಿನ 1,60,000 ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುತ್ತಿರುವುದು ಮತ್ತು ಮರಗಿಡಗಳನ್ನು ನೆಟ್ಟು ಹಸಿರು ಕ್ರಾಂತಿ ಮಾಡಲು ಹೊರಟಿರುವ ಇವರ ಕೆಲಸ ಸ್ಪೂರ್ತಿ ಮತ್ತು  ಪ್ರೇರಣದಾಯಕವಾಗಿದೆ.

ವಿಘ್ನ ವಿನಾಶಕ ಶ್ರೀ ಗಣೇಶನಿಗೆ ಹಾಗು ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಡಾ. ತೇಜಸ್ವಿನಿ ಅನಂತ್ ಕುಮಾರ್ ಅವರು ಮಕ್ಕಳಿಗೆ ಬಿಸಿಯೂಟ ಅಭಿಯಾನವನ್ನು ನಡೆಸಲು ಅದಮ್ಯ ಚೇತನ ಸಂಸ್ಥೆ ಯಾವುದೇ ರೀತಿಯ ಅಡುಗೆ ಅನಿಲ ಅಥವಾ ವಿದ್ಯುತ್ ಬಳಸಿಕೊಳ್ಳವುದಿಲ್ಲ ಎಂದರು. ಮತ್ತು ಭಾರತವನ್ನು ಆಳಿದ ಮುಖ್ಯ ರಾಜವಂಶಗಳ ಪೈಕಿ 12 ರಾಜವಂಶಗಳ ಅಳ್ವಿಕೆ ಕರ್ನಾಟಕದಿಂದ ಎಂದು ತಿಳಿಸಿದರು. ಅದಕ್ಕಿಂತ ಆಶ್ಚರ್ಯ ಎಂದರೆ ಜ್ಞಾನವ್ಯಾಪಿ ಮಸೀದಿಯಲ್ಲಿ ಕನ್ನಡ ಅಕ್ಷರಗಳನ್ನು ಕಂಡಿದ್ದು ಅವರು ತಮ್ಮ ಜ್ಞಾನವನ್ನು ಹಂಚಿಕೊಂಡಾಗ ಕನ್ನಡ ಹಿರಿಮೆ ಬಗ್ಗೆ ಗರ್ವ ಉಂಟಾಗಿತ್ತು ಮತ್ತು ಪ್ಲಾಸ್ಟಿಕ್ ಭೂಮಿ ಒಳಗೆ ಹೋಗದಿರಲು ಚಿಕ್ಕ ಚಿಕ್ಕ ಪ್ರಯೋಜನಗಳನ್ನು ಮಾಡಿರುವ ಮತ್ತು ಊಟದ ತಟ್ಟೆಗಳನ್ನು ಲೋಟಗಳನ್ನು ಮರುಬಳಕೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ರೀತಿ ಚಿಕ್ಕ ಚಿಕ್ಕ ಬದಲಾವಣೆಗಳಿಂದ ಸಮಾಜದಲ್ಲಿ ಹೇಗೆ ದೊಡ್ಡ ಬದಲಾವಣೆ ತರಬಹುದು ಎಂದು ತಿಳಿಸಿದರು.

ಅವರ ಬಿಸಿಯೂಟ ಕಾರ್ಯಕ್ರಮದ ರುಚಿಯನ್ನು ಗುರುಗಾಂವ್ ಕನ್ನಡ ಸಂಘದ ಸದಸ್ಯರು ಇತ್ತೀಚೆಗೆ ಅಯೋಧ್ಯ ನಗರಕ್ಕೆ ನೀಡಿದ ಪ್ರವಾಸದ ಸಮಯ  ಅಯೋಧ್ಯೆಯಲ್ಲಿ ಸವಿದಿದ್ದು ಇಲ್ಲಿನ ಕನ್ನಡಿಗರ ಸೌಭಾಗ್ಯವಾಗಿದೆ. ಅದನ್ನು ಗುರುಗಾಂವ್ ಕನ್ನಡ ಸಂಘದಿಂದ ಸ್ಮರಿಸುತ್ತಾ, ಯುಗಾದಿ ಸಾಂಸ್ಕೃತಿಕ ಸಂಭ್ರಮದ ಈ ಕಾರ್ಯಕ್ರಮದಲ್ಲಿ ಡಾ. ತೇಜಸ್ವಿನಿ ಅನಂತಕುಮಾರ್ ಅವರು ಭಾಗವಹಿಸುತ್ತಿರುವುದು ಇಲ್ಲಿನ ಕನ್ನಡಿಗರಿಗೆಲ್ಲಾ ಹೆಮ್ಮೆ ತಂದಿದೆ.

ಸಭಾ ಕಾರ್ಯಕ್ರಮಕ್ಕಿಂತ ಮುಂಚೆ ಸ್ಥಳೀಯ ಕಲಾವಿದರಿಂದ ಪ್ರಸ್ತುತಿಗೊಂಡ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದವು. ಸ್ಥಳೀಯ ಕಲಾವಿದರು ಮನಮೋಹಕ ಪ್ರದರ್ಶನ ನೀಡಿದರು. ಮುಖ್ಯ ಅತಿಥಿಗಳಾದ ಶ್ರೀ ಸತ್ಯಪ್ರಕಾಶ್ ಆರ್. ಪಾಟಿಲ್ ಅವರು ಮಾತನಾಡಿ ಕರುನಾಡು, ಕರ್ನಾಟಕದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು ಯುಗಾದಿ ಮತ್ತು ಹೊರನಾಡ ಕನ್ನಡಿಗರ ಬಗ್ಗೆ ಮಾತನಾಡಿ ಸಂತೋಷ ವ್ಯಕ್ತಪಡಿಸಿದರು. ದೆಹಲಿ

ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ ಅವರು ಮಾತನಾಡಿ ದಿವಂಗತ ಶ್ರೀ ಅನಂತಕುಮಾರ್ ಹಾಗೂ ಡಾ. ತೇಜಸ್ವಿನಿ ಅನಂತ್ ಕುಮಾರ್ ಅವರ ಬಗ್ಗೆ ಮೆಚ್ಚುಗೆಯನ್ನು, ಕೃತಜ್ಞತೆಗಳನ್ನು ಅರ್ಪಿಸಿದರು.

ಗುರುಗಾಂವ್ ಕನ್ನಡ ಸಂಘದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುಗಾದಿ ಸಾಂಸ್ಕೃತಿಕ ಸಂಭ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ .ಎಂ ಮಾತನಾಡಿ ಯುಗಾದಿಯನ್ನು ಹಳ್ಳಿ ಹಳ್ಳಿಯಲ್ಲಿ ಆಚರಣೆ ಮಾಡುತ್ತಿದ್ದ ರೀತಿಗಳನ್ನು ವಿವರಿಸಿದ್ದರು, ಅದರಲ್ಲಿ ಬೇವು-ಬೆಲ್ಲ,ಹೋಳಿಗೆ, ಎಣ್ಣೆ ಸ್ನಾನ ಎಲ್ಲವನ್ನು ನೆನಪಿಸುತ್ತಾ ಜೊತೆಯಲ್ಲಿ ಕರ್ನಾಟಕವನ್ನು ಬಿಟ್ಟು ಇಷ್ಟು ದೂರ ಬಂದ ಮೇಲೂ ಸಹ ನಾವು ಯುಗಾದಿ ಹಬ್ಬವನ್ನು ಯಾಕೆ ಆಚರಿಸುತ್ತಿದ್ದೇವೆ ಎಂದು ಹೇಳುತ್ತಾ ನಾವೆಲ್ಲರೂ ಹೊರನಾಡಿನಲ್ಲಿದ್ದರೂ ಒಟ್ಟಿಗೆ ಎಲ್ಲರೂ ಒಂದು ಕಡೆ ಸೇರಬೇಕು ಒಬ್ಬರಿಗೆ ಒಬ್ಬರು ಪರಿಚಯ ಮಾಡಿಕೊಳ್ಳಬೇಕು. ಕಷ್ಟ ಸುಖ,ನೋವು ನಲಿವುಗಳಲ್ಲಿ ಸ್ಪಂದಿಸಬೇಕು ಹಾಗೂ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ನಾವು ಉಳಿಸಬೇಕು ಮತ್ತು ಬೆಳಸಬೇಕು. ಬೆಳೆಸುವುದರ ಜೊತೆಗೆ ಮುಂದಿನ ಜನಾಂಗಕ್ಕೆ ನಾವು ತಿಳಿಸಬೇಕು ಆದ ಕಾರಣ 2003ರಲ್ಲಿ ಪ್ರಥಮವಾಗಿ ನಮ್ಮ ಕೆಲವು ಹಿರಿಯರ ಜೊತೆ ಸೇರಿ ನಾವು ಯುಗಾದಿ ಸಾಂಸ್ಕೃತಿಕ ಸಂಭ್ರಮವನ್ನು ಆಚರಿಸಲಾಯಿತು.

ಅಂದಿನಿಂದ ಇಂದಿನವರೆಗೂ ಸತತವಾಗಿ 21ನೇ ವರ್ಷ ಈ ಹಬ್ಬವನ್ನು ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಇದರ ಮದ್ಯೆಯಲ್ಲಿ ಸಂಘದಲ್ಲಿ ಸತ್ಯನಾರಾಯಣ ಪೂಜೆ, ಗಣೇಶ ಹಬ್ಬ ,ಕರ್ನಾಟಕ ರಾಜ್ಯೋತ್ಸವ, ಆಟೋಟ ಸ್ಪರ್ಧೆ ಇನ್ನು ಕೆಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಇದರ ಜೊತೆಯಲ್ಲಿ ಸಂಘವು ಕನ್ನಡ ಮಕ್ಕಳಿಗೆ ಕನ್ನಡ ಕಲಿಕಾ ಕೇಂದ್ರವನ್ನು ಸ್ಥಾಪಿಸಿ ಕನ್ನಡ ಕಲಿಸುತ್ತಾ ಬರುತ್ತಿದೆ. ಮೊಟ್ಟಮೊದಲ ಬಾರಿಗೆ ಸಂಘವು 100 ಜನರನ್ನು ಗುರುಗಾಂವ್ ಕನ್ನಡ ಸಂಘದ ವತಿಯಿಂದ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಯೋಧ್ಯೆಯ ಶ್ರೀ ರಾಮನ ದರ್ಶನ ಮಾಡಿಸಲಾಯಿತು, ಇದಕ್ಕೆ ಸಹಕಾರ ನೀಡಿದ ಹರಿಯಾಣ ರಾಜ್ಯ ಬಿಜೆಪಿ ಮುಖ್ಯಸ್ಥರು ಬಿಜಿನೆಸ್ ಸೆಲ್​ನ ಶ್ರೀ ನವೀನ್ ಗೋಯಲ್ ಮತ್ತು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸಮಾಜ ಸೇವಕಿ ಅನ್ನಪೂರ್ಣೇಶ್ವರಿ ಡಾ. ತೇಜಸ್ವಿನಿ ಅನಂತಕುಮಾರ್ ಅವರ ಸಹಕಾರದಿಂದ ಸಾಧ್ಯವಾಯಿತು ಎಂದರು.

ಇನ್ನು ನಮ್ಮ ಇಲ್ಲಿನ ಕೆಲವು ಕನ್ನಡಿಗರು ಹಿರಿಯರು ತಾಯಿನಾಡಿಗೆ ವಾಪಸ್ ಹೋಗುತ್ತಿದ್ದಾರೆ. ಇವತ್ತಿನ ಯುವಕರು ತುಂಬಾ ವರ್ಷಗಳ ಕಾಲ ಗುರುಗಾಂವ್ ನಲ್ಲಿ ಉಳಿಯುತ್ತಿಲ್ಲ ಆದ್ದರಿಂದ ಬರುವ ಎಲ್ಲಾ ಕನ್ನಡಿಗರು ಸಂಘದ ಜೊತೆ ಕೈಜೋಡಿಸಬೇಕು, ಸಂಘವನ್ನು ಬೆಳೆಸುವಲ್ಲಿ ಸಹಕರಿಸಬೇಕು ಹಾಗೂ ಎಲ್ಲರೂ ಮುಂದಿನ ಕಾರ್ಯಕ್ರಮಗಳಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಎಲ್ಲಾ ಕನ್ನಡಿಗರನ್ನ ಕೇಳಿಕೊಂಡರು. ಬಂದಂತಹ ಉದ್ಘಾಟಕರಿಗೆ, ಮುಖ್ಯಅತಿಥಿಗಳಿಗೆ ಕಲಾವಿದರರಿಗೆ ಹಾಗೂ ಕನ್ನಡಿಗರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಸಭಾ ಕಾರ್ಯಕ್ರಮದ ನಂತರ ರಾಜ್ಯದಿಂದ ಬಂದಿದ್ದ ಕಲಾವಿದರಾದ ಜೀ ಕನ್ನಡ ಟಿವಿ ಸರಿಗಮಪ ಸೀಸನ್ 20ರ ವಿಜೇತ ಗಾಯಕ ಶ್ರೀ ದರ್ಶನ್ ನಾರಾಯಣ್ ಅವರ ಸುಮಧುರ ಹಾಡುಗಳು ಮತ್ತು ಡಾ.ಮಾಲಿನಿ ರವಿಶಂಕರ್ ಅವರ ಲಾಸ್ಯ ವರ್ಧನ ಟ್ರಸ್ಟ್ ನ ತಂಡದಿಂದ ಅಮೋಘವಾಗಿ ಮೂಡಿಬಂದ ಸಂಖ್ಯಾ ಸಮಾಗಮ ಹಾಗೂ ನೃತ್ಯ ವೈಭವ ಕಾರ್ಯಕ್ರಮಗಳು ನೆರೆದಿದ್ದ ಕನ್ನಡಿಗರ ಮನರಂಜಿಸಿದವು.

ಸಭೆಯಲ್ಲಿ ತುಂಬಿ ತುಳುಕುತ್ತಿದ್ದ ಪ್ರೇಕ್ಷಕರು ದರ್ಶನ್ ನಾರಾಯಣ್ ಅವರ ಹಾಡುಗಳನ್ನು ಕೇಳಿ ಅವರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಕ್ಕಳು , ಹಾಗು ಪುರುಷರು ಎನ್ನದೆ ಎಲ್ಲರೂ ವೇದಿಕೆಯ ಮೇಲೆ ನ್ಯತ್ಯ ಮಾಡಿದರು. ಡಾ.ಮಾಲಿನಿ ರವಿಶಂಕರ್ ಅವರ ತಂಡದ ಕಲಾವಿದರು ನಡೆಸಿಕೊಟ್ಟ ಸಂಖ್ಯಾ ಸಮಾಗಮ ಹಾಗೂ ನೃತ್ಯ ವೈಭವ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ದರ್ಶನ್ ನಾರಾಯಣ್ ಇನ್ನಷ್ಟು ಹಾಡುಗಳನ್ನು ಹಾಡಬೇಕು ಮತ್ತು ಡಾ. ಮಾಲನಿ ರವಿಶಂಕರ್ ಅವರ ತಂಡ ಇನ್ನಷ್ಟು ನೃತ್ಯ ಮಾಡಬೇಕು ಎಂದು ವಿನಂತಿ ಮಾಡಿಕೊಂಡು ಸಂಗೀತ ಸಂಜೆಯ ರಸದೌತಣವನ್ನು ಸವಿದರು. ಗಾಯಕ ದರ್ಶನ್ ನಾರಾಯಣ್ ಅವರು ಮತ್ತು ಡಾ ಮಾಲನಿ ರವಿಶಂಕರ್ ಅವರು ನಮ್ಮ ಗುರುಗಾಂವ್ ಕನ್ನಡ ಸಂಘದ ಆಮಂತ್ರಣಕ್ಕೆ ಓಗೊಟ್ಟು ಇಲ್ಲಿ ಕಾರ್ಯಕ್ರಮ ನೀಡಿದ್ದು ಎಲ್ಲರಿಗೂ ಅತ್ಯಂತ ಸಂತಸವನ್ನು ತಂದಿತು.

ಗುರುಗಾಂವ್ ಕನ್ನಡ ಸಂಘದಿಂದ ಈ ಬಾರಿ ಗುರುಗಾಂವ್ ಕನ್ನಡ ಸೇವಾ ಪ್ರಶಸ್ತಿ ಯನ್ನು ಶ್ರೀಮತಿ ಸುಮತಿ ಹೆರೇಂಜಲ್ ಅವರಿಗೆ ನೀಡಿ ಗೌರವಿಸಲಾಯಿತು. ಅವರ ಬಗ್ಗೆ ಶ್ರೀಮತಿ ಭಾರತಿ ತಿಮ್ಮಪ್ಪ ಹೇಳಿದರು, ಶ್ರೀಮತಿ ಸುಮತಿ ಹೆರೇಂಜಲ್ ಅವರು ಗುರುಗಾಂವ್ ನಗರದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ಸಂಘ ಕಟ್ಟಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಗುರುಗಾಂವ್ ಕನ್ನಡ ಕಲಿಕಾ ಕೇಂದ್ರದಲ್ಲಿ ಪಾತ್ರ ನಿರ್ವಹಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಇನ್ನೊಬ್ಬ ಮುಖ್ಯ ಅತಿಥಿ ಗಳಾದ ಶ್ರೀ ನವಿನ್ ಗೊಯಲ್ ಅವರ ಬಗ್ಗೆ ಗುರುಗಾಂವ್ ನಗರದಲ್ಲಿ ಇರುವ ಪ್ರತಿಯೊಬ್ಬ ಕನ್ನಡಿಗರಿಗೆ ಅವರು ಸೇವೆಯ ಬಗ್ಗೆ ಗೊತ್ತು. ಅವರ ಸಂಸ್ಥೆ ಕೆನ್ವಿನ್ ಫೌಂಡೇಶನ್ ನಡೆಸುವ ಆಸ್ಪತ್ರೆ , ಪರಿಸರ , ಸಮಾಜ ಕಾರ್ಯಗಳ ಬಗ್ಗೆ ಇರುವ  ಕಾಳಜಿ ವಹಿಸಿದ್ದಾರೆ. ಮುಖ್ಯವಾಗಿ ಶ್ರೀ ನವಿನ್ ಗೊಯಲ್ ಅವರು ಗುರುಗಾಂವ್ ಕನ್ನಡ ಸಂಘದ ಸದಸ್ಯರು ಕೈಗೊಂಡ ಅಯೋಧ್ಯೆ ಯಾತ್ರೆಗೆ ಬಸ್ ಸೇವೆಯನ್ನು ಒದಗಿಸಿದ್ದರು ಅವರ ಅಣ್ಣ ಶ್ರೀ ಡಿ.ಪಿ ಗೊಯಲ್ ಬಂದು ನೆರದಿರುವ ಕನ್ನಡಿಗರ ಬಗ್ಗೆ ಮುಕ್ತ ಕಂಠದಿಂದ ಕೊಂಡಾಡಿದರು.

ಈ ಸಂದರ್ಭದಲ್ಲಿ ವೃತ್ತಿಯಲ್ಲಿ ಉನ್ನತಿ ಪಡೆದು ಗುಜರಾತಿಗೆ ಹೋಗುತ್ತಿರುವ ನಮ್ಮ ಕಾರ್ಯಕಾರಣಿ ಸಮಿತಿಯ ಸದಸ್ಯ ಶ್ರೀ ಸಿದ್ದು ಸಾಹುಕಾರ್ ಮತ್ತು ಅವರ ಕುಟುಂಬದವರಿಗೆ ಶುಭ ಕೋರಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಆಗಮಿಸಿದ್ದ ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳನ್ನ ಸಂಘದ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು. ಕಲಾವಿದರನ್ನು ಸನ್ಮಾನಿಸಲಾಯಿತು. ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀಮತಿ ಮಾಲ ರಮೇಶ್ ಮತ್ತು ಶ್ರೀಮತಿ ಸುನಂದ ಸಾಬು ರವರು ನಡೆಸಿಕೊಟ್ಟರು ಸ್ವಾಗತ ಭಾಷಣ ಮರಿಬಸಪ್ಪ .ಎಂ ಹಾಗೂ ವೇದಿಕೆ ಕಾರ್ಯಕ್ರಮ ರಾಜಕುಮಾರ ನೀಲೂರ್ ಮತ್ತು ಚಂದ್ರಶೇಖರ್.ಕೆ ರವರು ನಡೆಸಿಕೊಟ್ಟರು. ದೆಹಲಿ, ಎನ್ಸಿಆರ್ ಹಾಗೂ ಭೀವಾಡಿ ಹಾಗು ವಿವಿಧೆಡೆಯಿಂದ ಆಗಮಿಸಿದ್ದ ಎಲ್ಲಾ ಗಣ್ಯವ್ಯಕ್ತಿಗಳು ಹಾಗು ಕನ್ನಡ ಬಂಧುಗಳಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಜೋಳದರಾಶಿ ಅವರು ಅರ್ಪಿಸಿದರು. ರಾತ್ರಿಯ ರುಚಿಕರ ಭೋಜನವನ್ನು ಸವಿದು ಎಲ್ಲ ಕನ್ನಡಿಗರು ಸಂತಸಪಟ್ಟರು.

ಕೃಷ್ಣಪ್ಪ .ಎಂ ಚೆಂದ್ರಶೇಖರ್ ಜೋಳದರಾಶಿ ಗುರುಗಾಂವ್ ಕನ್ನಡ ಸಂಘ.