ನವದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮವನ್ನು ವಿರೋಧಿಸಿ, ದೆಹಲಿಯ ಜಂತರ್-ಮಂತರ್ನಲ್ಲಿ ಭಾರಿ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಪಡೆದಿದ್ದ ಕಾಕ್ರೋಚ್ ಜನತಾ ಪಾರ್ಟಿ, ಈಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ದೇಶದಲ್ಲಿ ಚುನಾವಣಾ ಆಯೋಗದ ಹಾಗೂ ಮುಖ್ಯ ಚುನಾವಣಾ ಆಯುಕ್ತರ ಬಗ್ಗೆ ಕೆಲ ಆಪಾದನೆ ಹಾಗೂ ಆರೋಪಗಳು ಕೇಳಿಬಂದ ಹಿನ್ನಲೆ, ಮುಂದಿನ 48 ಗಂಟೆಯೊಳಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar Resignation) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಕ್ರೋಚ್ ಪಕ್ಷ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಕ್ರೋಚ್ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆ, ಎರಡು ದಿನಗಳ ಒಳಗಾಗಿ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಅಂತಯೇ, ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ತಡೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಕಾಕ್ರೋಚ್ ಜನತಾ ಪಾರ್ಟಿ ವಕ್ತಾರ, ಸೌರವ್ ದಾಸ್, ತಕ್ಷಣ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು. ಚುನಾವಣಾ ಪರಿಷ್ಕರಣೆಯಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಈ ರೀತಿ ಮಾಡುವಂತೆ ನಿರ್ದೇಶನ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೆ ಮುಂದೆ ವಿವಿಧ ರಾಜ್ಯಗಳಲ್ಲಿ ನಡೆಯಲಿದ್ದ ವಿಧಾನಸಭಾ ಚುನಾವಣೆಗಳನ್ನು ಸ್ಥಗಿತಗೊಳಿಸಿಬೇಕು. ಜೊತೆಗೆ ಎಸ್ಐಆರ್ ನೀತಿಯನ್ನು ಹಿಂಪಡೆಯಬೇಕೆಂದು ದಾಸ್ ಆಗ್ರಹಿಸಿದ್ದಾರೆ.
ನಮ್ಮ ಈ ಬೇಡಿಕೆಗಳನ್ನು ಈಡೇರಿಸದೇ ಹೋದರೆ, ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು, ಮುಖ್ಯ ಚುನಾವಣಾ ಆಯ್ತುಕರು ಆದಷ್ಟು ಬೇಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಅಂತೆಯೇ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪತ್ರಿಕೆಯೊಂದರ ತನಿಖಾ ವರದಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ಕೆಲವೊಂದಿಷ್ಟು ನಿರ್ಧಾರಗಳ ವಿರುದ್ಧ ಇತರ ಆಯಕ್ತರು ವಿರೋಧವನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿತ್ತು.
ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಗಮನಕ್ಕೆ ತರದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೊರಡಿಸಿದ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ. ಈ ಆಕ್ಷೇಪಣೆಗಳಲ್ಲಿ ಮತದಾರರ ನೋಂದಣಿಯ ಶಾಸನಬದ್ಧ ಅರ್ಜಿ ಫಾರ್ಮ್ 6 ರಲ್ಲಿ ಮಾಡಲಾದ ಬದಲಾವಣೆಗಳು ಮತ್ತು ಮತದಾರರ ಪಟ್ಟಿಯ ಡೇಟಾಬೇಸ್ ಮೇಲಿನ ಕೇಂದ್ರೀಕೃತ ನಿಯಂತ್ರಣವೂ ಸೇರಿದೆ ಎಂದು ಹೇಳಲಾಗಿದೆ.
ಆದರೆ, ಚುನಾವಣಾ ಆಯೋಗ, ವಿಭಿನ್ನ ಅಭಿಪ್ರಾಯಗಳು ಸಮಾಲೋಚನೆಯ ಸಾಮಾನ್ಯ ಭಾಗವಾಗಿದ್ದು, ಎಸ್ಐಆರ್ಗೆ ಸಂಬಂಧಿಸಿದ ನಿರ್ಧಾರಗಳು ಸೇರಿದಂತೆ ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದವು ಎಂದು ಹೇಳಿದೆ. ಇತ್ತ ಸಂಧು ಅಥವಾ ಜೋಶಿ ಇಬ್ಬರೂ ತಮ್ಮ ಹೆಸರಿನಲ್ಲಿ ಪ್ರಕಟವಾದ ಈ ಆಕ್ಷೇಪಣೆಗಳ ಬಗ್ಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ಈ ವಿಷಯ ಬಹಿರಂಗವಾದ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮೇಲಿನ ಅನುಮಾನ ಇನ್ನಷ್ಟು ಹೆಚ್ಚಾಗಿದ್ದು, ಎಸ್ಐಆರ್ ನೆಪದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಟ್ಟು, ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಆದರೆ, ಚುನಾವಣಾ ಆಯೋಗವು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ, (ಏಜೆನ್ಸೀಸ್).