ನ್ಯೂಸ್

ಬೆಂಗಳೂರಲ್ಲಿ ವಿದೇಶಿಗರಿದ್ದ 35 ಮನೆಗಳ ಮೇಲೆ ರಾತ್ರೋರಾತ್ರಿ ಸಿಸಿಬಿ ರೇಡ್​... ಬೆಚ್ಚಿ ಬೀಳಿಸುತ್ತೆ ಅಲ್ಲಿನ ಅಕ್ರಮ

ಬೆಂಗಳೂರು: ರಾಜ್ಯ ರಾಜಧಾನಿಯ ಹೆಣ್ಣೂರು, ಬಾಣಸವಾಡಿ, ಕೊತ್ತನೂರು ಸುತ್ತಮುತ್ತ ವಿದೇಶಿಗರು ವಾಸವಿರುವ 35 ಮನೆಗಳ ಮೇಲೆ ಸೋಮವಾರ ತಡರಾತ್ರಿ ರೇಡ್ ಮಾಡಿದ ಸಿಸಿಬಿ ಅಧಿಕಾರಿಗಳ ತಂಡ 85 ಮಂದಿಯನ್ನು ವಶಕ್ಕೆ ಪಡೆದಿದೆ.

ಸಿಸಿಬಿ ದಾಳಿ ವೇಳೆ ವಿದೇಶಿಗರ ಬಳಿ ನಕಲಿ ನೋಟುಗಳು ಪತ್ತೆಯಾಗಿದೆ. ಹಲವರು ವೀಸಾ, ಪಾಸ್​ ಪೋರ್ಟ್ ಇಲ್ಲದಿದ್ದರೂ ಅಕ್ರಮವಾಗಿ ನೆಲೆಸಿರುವುದು ಗೊತ್ತಾಗಿದೆ. ಮೊನ್ನೆ(ಭಾನುವಾರ) ರಾತ್ರಿ ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯಲ್ಲಿ ಕರೊನಾ ಸೋಂಕಿನ ಭೀತಿ ನಡುವೆಯೂ ನೈಜೀರಿಯಾ ಪ್ರಜೆಗಳು ಬೀದಿಬದಿಯಲ್ಲೇ ಎಣ್ಣೆ ಪಾರ್ಟಿ ಮಾಡುತ್ತ ಸ್ಥಳೀಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸರಿಗೆ ಅಶ್ಲೀಲ ಸನ್ನೆ ಮಾಡಿ ನಿಂದಿಸಿದ್ದರು. ಇದಾದ ಮರುದಿನವೇ ಸಿಸಿಬಿ ಪೊಲೀಸರು ಹೆಣ್ಣೂರು ಮತ್ತು ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 35 ವಿದೇಶಿಗರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

120 ಸಿಸಿಬಿ ಅಧಿಕಾರಿಗಳ ತಂಡ ತಡರಾತ್ರಿ ಹೆಣ್ಣೂರು, ಬಾಣಸವಾಡಿ, ಕೊತ್ತನೂರು ಸುತ್ತಮುತ್ತ ಮನೆಗಳ ಮೇಲೆ ರೇಡ್ ಮಾಡಿದಾಗ ವಿದೇಶಿಗರಿದ್ದ ಕೆಲ ಮನೆಗಳಲ್ಲಿ

ನಕಲಿ ನೋಟುಗಳು ಪತ್ತೆಯಾಗಿವೆ. 85 ವಿದೇಶಿಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಪೈಕಿ 7 ಜನರ ಬಳಿ ವೀಸಾ ಮತ್ತು ಪಾಸ್ ಪೋರ್ಟ್ ಇರಲಿಲ್ಲ. ಕೆಲವರ ಮನೆಗಳಲ್ಲಿ ಇಂಡಿಯನ್ ಕರೆನ್ಸಿ ಹಾಗೂ ಯುಎಸ್​ನ‌ ನಕಲಿ‌ ಡಾಲರ್ ಪತ್ತೆಯಾಗಿವೆ. ನಕಲಿ‌ ನೋಟುಗಳಿಂದ ಸಾರ್ವಜನಿಕರಿಗೆ ಮೋಸ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಎಂಬೆಸಿಯ ಗಮನಕ್ಕೆ ತಂದು ತನಿಖೆ ಮುಂದುವರಿಸಲಾಗುವುದು. ಇವರಿಗೆ ಸ್ಥಳೀಯರು ಸಹಾಯ ಮಾಡಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.

ಸಿಸಿಬಿ ವಶಕ್ಕೆ ಪಡೆದ 85 ಮಂದಿ ನೈಜೀರಿಯಾ, ಸ್ವಿಡಾನ್, ಆಫ್ರಿಕಾ ದೇಶದವರು ಎನ್ನಲಾಗಿದೆ. ಕೆಲವರ ವೀಸಾ, ಪಾಸ್ ಪೋರ್ಟ್ ಅವಧಿ ಮುಗಿದಿದ್ದರೂ ಅಕ್ರಮವಾಗಿ ವಾಸ ಇರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಗಳನ್ನು ಹೆಣ್ಣೂರು ಪೊಲೀಸ್ ಠಾಣೆ ಕರೆದೊಯ್ಯಲಾಗಿದೆ.