ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ನಿಜ ಸುದ್ದಿ ಹರಿದಾಡುವಷ್ಟೇ ಸುಳ್ಳು ಸುದ್ದಿಗಳೂ ಹರಿದಾಡುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ಒಂದು ಸುದ್ದಿ ಭಾರಿ ವೈರಲ್ ಆಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ತರಗತಿಗಳನ್ನು ನಡೆಸಲಾಗದ ಕಾರಣ, ಸಿಬಿಎಸ್ಇ ಮಂಡಳಿ ತನ್ನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಲು ಬೇಕಾದ ಅಂಕವನ್ನು ಪರಿಷ್ಕರಿಸಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವರ್ಷ ಶೇ. 35 ಅಲ್ಲ ಬರೀ ಶೇ. 25 ಅಂಕ ಬಂದರೂ ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ ಎನ್ನಲಾಗಿತ್ತು. ಈ ಪ್ರಕಟಣೆಯ ಅಸಲಿತ್ತೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಫ್ಯಾಕ್ಟ್ಚೆಕ್ ತಂಡವು ಈ ವಿಚಾರದ ಸತ್ಯತೆಯನ್ನು ಹೊರಗೆಳೆದಿದೆ. ಶೇ. 25 ಅಂಕ ತೆಗೆದರೂ ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ ಎಂದು ಸಿಬಿಎಸ್ಇ ಹೇಳಿಯೇ ಇಲ್ಲ. ಆದರೂ ಅಂತದ್ದೊಂದು ಎಡಿಟೆಡ್ ಪ್ರಕಟಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಅದು ವೈರಲ್ ಆಗಿದೆ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಸಲುವಾಗಿ ಇಂತಹ ಕುತಂತ್ರವನ್ನು ಯಾರೋ ದುಷ್ಕರ್ಮಿಗಳು ಮಾಡಿದ್ದಾರೆ ಎನ್ನಲಾಗಿದೆ.
ಅದರ ಜತೆ ಸಿಬಿಎಸ್ಇ 12 ಮತ್ತು 10 ನೇ ತರಗತಿಯ ಪರೀಕ್ಷಾ ದಿನಾಂಕವನ್ನು ಬದಲಿಸಿಯೂ ಪ್ರಕಟಣೆಯನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಆದರೆ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ತಿಳಿಸಿದಂತೆ ಮೇ 4ರಿಂದ ಜೂನ್ 10ರವರೆಗೆ ಸಿಬಿಎಸ್ಇ ಪರೀಕ್ಷೆ ನಡೆಯಲಿದೆ. (ಏಜೆನ್ಸೀಸ್)