CBI Probe On KCR: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ವಿರುದ್ಧ ಸಿಬಿಐ ತನಿಖೆ ಆರಂಭಿಸಿರುವುದನ್ನು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ (ಕೆಟಿಆರ್) ಖಂಡಿಸಿದ್ದು, ಇದು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದಿದ್ದಾರೆ.
ಎರ್ರವಳ್ಳಿಯಲ್ಲಿ ಮಾತನಾಡಿದ ಕೆಟಿಆರ್, ಮಲ್ಲಣ್ಣ ಸಾಗರ ಮತ್ತು ಕೊಂಡಪೋಚಮ್ಮ ಸಾಗರ ಸೇರಿದಂತೆ ಕೆಸಿಆರ್ ಜಾರಿಗೆ ತಂದಿರುವ ನೀರಾವರಿ ಯೋಜನೆಗಳನ್ನು ಶ್ಲಾಘಿಸಿದರು, ಇವು ಮುಂದಿನ 50 ವರ್ಷಗಳ ಕಾಲ ಹೈದರಾಬಾದ್‌ಗೆ ಕುಡಿಯುವ ನೀರನ್ನು ಒದಗಿಸುತ್ತವೆ ಎಂದರು.
ಚಂದ್ರಶೇಖರ ರಾವ್ ಜಾರಿಗೊಳಿಸಿರುವ ನೀರಾವರಿ ಯೋಜನೆಗಳು ತೆಲಂಗಾಣದ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸಿವೆ, ಇಂತಹ ದೂರದೃಷ್ಟಿಯ ನಾಯಕನನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಭಾರತದ ರಾಜಕಾರಣದ ಇತಿಹಾಸದಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ ಕೆಸಿಆರ್ ಮಾಡಿದಷ್ಟು ಅಭಿವೃದ್ದಿಯನ್ನು ಬೇರೆ ಯಾವ ನಾಯಕರು ಮಾಡಿಲ್ಲ ಎಂದರು. ಕೆಸಿಆರ್ ಆಡಳಿತಾವಧಿಯಲ್ಲಿನ ರಾಜ್ಯದ ಕೃಷಿ ಸಾಧನೆಗಳನ್ನು ಉಲ್ಲೇಖಿಸಿದ ಕೆಟಿಆರ್, ಕಾಳೇಶ್ವರಂ ವಿಶ್ವದ ಅತಿದೊಡ್ಡ ಲಿಫ್ಟ್ ನೀರಾವರಿ ಯೋಜನೆಯಾಗಿದ್ದು, ಮೇಡಿಗಡ್ಡದಿಂದ ಕೊಂಡಪೋಚಮ್ಮ ಸಾಗರಕ್ಕೆ ಪ್ರತಿದಿನ ಎರಡು ಟಿಎಂಸಿ ನೀರನ್ನು ಸಾಗಿಸುತ್ತದೆ. ಇದು ಲಕ್ಷಾಂತರ ಎಕರೆಗಳಿಗೆ ನೀರಾವರಿ ಮತ್ತು ಲೆಕ್ಕವಿಲ್ಲದಷ್ಟು ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ನಿವೃತ್ತ ಯೋಧ ಕೃಷ್ಣ ತುಂಬಗಿಗೆ ಅದ್ಧೂರಿ ಸ್ವಾಗತ
ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಯನ್ನು ಟೀಕಿಸಿದ ರಾಮರಾವ್, ರಾಹುಲ್ ಗಾಂಧಿ ಸಿಬಿಐ ಸಂಸ್ಥೆಯನ್ನು ಒಮ್ಮೆ "ಮೋದಿಯ ಜೇಬಿನ ಸಂಸ್ಥೆ" ಎಂದು ಕರೆದಿದ್ದರು, ಆದರೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅದೇ ಸಂಸ್ಥೆಯನ್ನು ಇಂದು ಹೊಗಳಿದ್ದಾರೆ. ಈ ದ್ವಂದ್ವ ನೀತಿಯೇ ಕಾಂಗ್ರೆಸ್ ಪಕ್ಷದ ಶೋಚನೀಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಎರಡು ರಾಷ್ಟ್ರೀಯ ಪಕ್ಷಗಳು ಕೆಸಿಆರ್ ಮೇಲಿನ ಜನರ ಪ್ರೀತಿಯನ್ನು ಸಹಿಸದೆ ಈ ರೀತಿಯಾಗಿ ಅವರನ್ನು ಕೆಣಕಲು ಪ್ರಯತ್ನಿಸುತ್ತಿವೆ ಎಂದರು.
ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಆರ್‌ಎಸ್ ನಾಯಕ, ಸರ್ಕಾರ ಕೇವಲ 21 ತಿಂಗಳಲ್ಲಿ ರಾಜ್ಯವನ್ನು ಅವ್ಯವಸ್ಥೆಗೆ ದೂಡಿದ್ದು, ರೈತರು ಯೂರಿಯಾ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದರು.(ಏಜೆನ್ಸೀಸ್)