ನ್ಯೂಸ್

ಇಂಟರ್​​ಪೋಲ್ ಜತೆ ಸಮನ್ವಯ ಸಾಧಿಸಿದ ಸಿಬಿಐ: ಬೆಂಗಳೂರಿಂದ ಅಮೆರಿಕಕ್ಕೆ ಪರಾರಿಯಾಗಿದ್ದ ಅಪರಾಧಿಯ ಬಂಧನ

ಬೆಂಗಳೂರು: ಒಂದು ಮಹತ್ವದ ಕಾರಣಕ್ಕಾಗಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಇಂಟರ್​​ಪೋಲ್ ಜತೆ ಸಮನ್ವಯ ಸಾಧಿಸಿದೆ. ಸಿಬಿಐನ ಜಾಗತಿಕ ಕಾರ್ಯಾಚರಣೆ ಕೇಂದ್ರವು ಇಂಟರ್​ಪೋಲ್ ಜತೆ ನಡೆಸಿದ ಸಮನ್ವಯದಿಂದಾಗಿ ಪ್ರಮುಖ ಅಪರಾಧಿಯೊಬ್ಬನ ವಶವಾದಂತಾಗಿದೆ.

ರೆಡ್ ನೋಟಿಸ್​​ಗೆ ಗುರಿಯಾದ ಅಪರಾಧಿಯನ್ನು ಅಮೆರಿಕದಿಂದ ವಾಪಸ್ ಕರೆಸಿಕೊಳ್ಳುವ ಸಲುವಾಗಿ ಇಂಟರ್​ಪೋಲ್​ ಜತೆ ಸಿಬಿಐ ಈ ಸಮನ್ವಯ ಸಾಧಿಸಿತ್ತು. ಪರಿಣಾಮವಾಗಿ, ರೆಡ್ ನೋಟಿಸ್​​ಗೆ ಒಳಪಟ್ಟ ಅಪರಾಧಿ ಅಮೆರಿಕದಿಂದ ಭಾರತಕ್ಕೆ ವಾಪಸಾಗಿದ್ದಾನೆ.

ಬೆಂಗಳೂರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್​​ಗಳಿಗೆ ನೀಡಿ ಸಾಲ ಪಡೆದು (ಇನ್‌ಲ್ಯಾಂಡ್ ಲೆಟರ್ ಆಫ್ ಕ್ರೆಡಿಟ್ಸ್) ವಂಚನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ರೆಡ್ ನೋಟಿಸ್​ಗೆ ಗುರಿಯಾಗಿದ್ದ ವ್ಯಕ್ತಿಯು ಸಿಬಿಐಗೆ ಬೇಕಾಗಿತ್ತು.

ಸಿಬಿಐ ಮನವಿ ಮೇರೆಗೆ ಈತನ ವಿರುದ್ಧ ಏ. 4ರಂದು ಇಂಟರ್​​ಪೋಲ್ ರೆಡ್ ನೋಟಿಸ್ ಹೊರಡಿಸಲಾಗಿತ್ತು. ಈತನನ್ನು ಬೆಂಗಳೂರಿನ ಸಿಬಿಐ ಪ್ರಕರಣಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಅಪರಾಧಿ ಎಂದು ಘೋಷಿಸಿ, 3 ವರ್ಷಗಳ ಜೈಲು ಶಿಕ್ಷೆಗೆ ಗುರಿ ಮಾಡಿದ್ದರು. ಈ ತೀರ್ಪಿನ ನಂತರ ನಂತರ ಈತ ದೇಶದಿಂದ ಪರಾರಿಯಾಗಿದ್ದ.

ಆರೋಪಿಯು ಅಮೆರಿಕದಿಂದ ಸಂಯುಕ್ತ ಅರಬ್ ಎಮಿರೇಟ್ಸ್ ಮೂಲಕ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಸಿಬಿಐ ಬಂಧಿಸಿತು. ಆತನನ್ನು ಇಂದು ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.