ನ್ಯೂಸ್

ನೀಟ್​ ಪ್ರಶ್ನೆಪತ್ರಿಕೆ ಸ್ಕ್ಯಾಮ್​; ಕಿಂಗ್​ಪಿನ್​​ನನ್ನು ಅರೆಸ್ಟ್​ ಮಾಡಿದ ಸಿಬಿಐ

ನವದೆಹಲಿ: ವೈದ್ಯಕೀಯ ಕೋರ್ಸ್​ ಪ್ರವೇಶಾತಿಗೆ ಸರ್ಕಾರದ ವತಿಯಿಂದ ನಡೆಸಲಾಗುವ ನೀಟ್​ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ ಮೈಂಡ್​ ರಾಕೇಶ್​ ರಂಜನ್​ ಅಲಿಯಾಸ್​ ರಾಕಿ ಎಂಬಾತನನ್ನು ಸಿಬಿಐ ಬಂಧಿಸಿದೆ. ಬಂಧಿತನನ್ನು ಕೋರ್ಟ್​ 10 ದಿನಗಳ ಕಾಲ ಸಿಬಿಐ ಕಸ್ಟಡಿಗೆ ವಹಿಸಿದೆ.

ನೀಟ್​ ಪ್ರಶ್ನೆ ಪತ್ರಕೆ ಸೋರಿಕೆ ಸಂಬಂಧ ಪಟ್ನಾ ಹಾಗೂ ಕಲ್ಕತ್ತಾದಲ್ಲಿ ದಾಳಿ ಮಾಡಲಾಗಿತ್ತು. ಈ ವೇಳೆ ಆರೋಪಿ ಸಿಬಿಐ ಬಲೆಗೆ ಬಿದ್ದಿದ್ದಾನೆ ಎಂದು ವರದಿಯಾಗಿದೆ. ಆದರೆ, ಆರೋಪಿಯನ್ನು ಎಲ್ಲಿ ಬಂಧಿಸಲಾಯಿತು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ಮೈಂಡ್​ ರಾಕಿಯನ್ನು ಸಿಬಿಐ ಬಂಧಿಸಿದೆ.

ಕಳೆದ ಜುಲೈ 9ರಂದು ಕೇವಲ 2 ದಿನಗಳ ಹಿಂದಷ್ಟೇ ಪೇಪರ್ ಸೋರಿಕೆ ಪ್ರಕರಣದಲ್ಲಿ ಮತ್ತಿಬ್ಬರನ್ನು ಸಿಬಿಐ ಬಂಧಿಸಿತ್ತು. ಬಂಧಿತರನ್ನು ಸನ್ನಿ ಕುಮಾರ್ ಮತ್ತು ಇನ್ನೊಬ್ಬ ನೀಟ್ ಅಭ್ಯರ್ಥಿಯ ತಂದೆ ರಂಜೀತ್ ಕುಮಾರ್ ಎಂದು ಗುರುತಿಸಲಾಗಿದೆ. ಸನ್ನಿಯನ್ನು ನಳಂದಾದಿಂದ ಬಂಧಿಸಲಾಗಿದ್ದರೆ, ರಂಜಿತ್‌ನನ್ನು ಗಯಾದಲ್ಲಿ ಬಂಧಿಸಲಾಗಿತ್ತು.

ನೀಟ್​-ಯುಜಿ ಪರೀಕ್ಷೆಯನ್ನು ಮೇ 5 ರಂದು ಭಾರತದಾದ್ಯಂತ ನಡೆಸಲಾಯಿತು. ಅಂದಾಜು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಕೇಶ್ ರಂಜನ್ ಬಿಹಾರದಿಂದ ಬಂಧಿತ 9ನೇ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಗುಜರಾತ್ ಮತ್ತು ಡೆಹ್ರಾಡೂನ್‌ನಲ್ಲಿ ಹಲವರನ್ನು ಬಂಧಿಸಲಾಗಿದೆ.