ಮೀರತ್: ಇತ್ತೀಚಿನ ದಿನಗಳಲ್ಲಿ ಹಠಾತ್ ಸಾವಿಗೆ ಒಳಗಾಗುವ ಘಟನೆಗಳು ಪದೇಪದೆ ಮರುಕಳಿಸುತ್ತಿದೆ. ಈ ಬಾರಿಯ ದುರ್ಘಟನೆಯಲ್ಲಿ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಲು ಬಂದಿದ್ದ ಅಪ್ರಾಪ್ತ ವಯಸ್ಕ ಹಠಾತನೇ ಮೃತಪಟ್ಟಿದ್ದಾನೆ.
ಉತ್ತರಪ್ರದೇಶದ ಥಾನಾ ಜಾನಿ ಪ್ರದೇಶದ ಸಿವಾಲ್ಖಾಸ್ನಲ್ಲಿರುವ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಲು ಸಮಿರ್ ಎಂಬಾತ ಬಂದಿದ್ದಾನೆ. 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸಮೀರ್ ಮಧ್ಯಾಹ್ನ ಸ್ನೇಹಿತರ ಜತೆ ಕ್ರಿಕೆಟ್ ಆಡಿದ ಬಳಿಕ ಈಜುಕೊಳಕ್ಕೆ ಬಂದು ಸ್ವಿಮ್ಮಿಂಗ್ ಮಾಡಿ ನೀರಿನಿಂದ ಹೊರಬಂದು ಕೆಲವೇ ಹೆಜ್ಜೆಗಳನ್ನು ಇಡುತ್ತಿದ್ದಂತೆ ನಡೆಯಲು ಆಗದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಈಜುಕೊಳದ ಬಳಿ ಇದ್ದವರು ಆತನನ್ನು ಎತ್ತಿಕೊಂಡು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯ ವೈದ್ಯರು ಸಮೀರ್ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯು ಅಲ್ಲಿದ್ದವರಿಗೆ ಆತಂಕ ಸೃಷ್ಟಿಯಾಗಿದೆ. ಈಜುಕೊಳದಿಂದ ಹೊರಬಂದ ಸಮೀರ್ ಹೇಗೆ ಇದ್ದಕ್ಕಿದ್ದಂತೆ ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದರು ಎಂಬ ದೃಶ್ಯ ಈಜುಕೊಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಂತರ ಈಜುಕೊಳಕ್ಕೆ ಸಾರ್ವಜನಿಕರ ಪ್ರವೇಶಿಸದಂತೆ ಮುಚ್ಚಲಾಗಿದ್ದು, ಮ್ಯಾನೇಜರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)