ನ್ಯೂಸ್

ಮಾತೃ ಹೃದಯಕ್ಕೆ ಸಾಟಿ ಎಲ್ಲಿ? ಮರಿ ಎತ್ತಿಕೊಂಡು ಎಮರ್ಜೆನ್ಸಿ ವಾರ್ಡ್​ನತ್ತ ಓಡಿದ ಬೆಕ್ಕು!.

ಟರ್ಕಿ: ಅಮ್ಮಾ... ಈ ಹೆಸರಿನಲ್ಲಿಯೇ ಅದೇನೋ ಸೆಳೆತವಿದೆ. ಮನುಷ್ಯರಷ್ಟೇ ಅಲ್ಲ, ಪ್ರತಿಯೊಂದು ಜೀವಿಯಲ್ಲಿಯೂ ಅಮ್ಮ-ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

ತಾಯಿ ಬೆಕ್ಕೊಂದು ಅನಾರೋಗ್ಯಪೀಡಿತವಾಗಿರುವ ತನ್ನ ಮರಿಯನ್ನು ಎತ್ತಿಕೊಂಡು ಸೀದಾ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್​ಗೆ ನುಗ್ಗಿದೆ. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯವೀಗ ಭಾರಿ ವೈರಲ್​ ಆಗಿದೆ.

ಇದು ನಡೆದದ್ದು ಟರ್ಕಿಯಲ್ಲಿ. ಇಲ್ಲಿಯ ಇಸ್ಟಾನ್​ಬುಲ್​ ಎಂಬ ಆಸ್ಪತ್ರೆಯಲ್ಲಿ ಕಳೆದ ವಾರ ಏಕಾಏಕಿಯಾಗಿ ಬೆಕ್ಕೊಂದು ಓಡಿ ಬಂದಿದೆ. ಅದರ ಬಾಯಲ್ಲಿ ಮರಿಯಿತ್ತು. ಬೆಕ್ಕು ಮರಿ ಹಾಕಿದಾಗ ಅದನ್ನು ಸುರಕ್ಷಿತವಾಗಿ ಇಡಲು ಜಾಗ ಹುಡುಕುತ್ತಲೇ ಇರುತ್ತದೆ. ಈ ಕಾರಣಕ್ಕೆ ಮರಿ ಹಾಕಿದ ಸಮಯದಲ್ಲಿ ಅದರ ಓಡಾಟ ಸಾಮಾನ್ಯವೇ.

ಇದೇ ರೀತಿ ಅಪ್ಪಿತಪ್ಪಿ ಏನಾದರೂ ಈ ಬೆಕ್ಕು ಆಸ್ಪತ್ರೆಗೆ ನುಗ್ಗಿಬಿಟ್ಟಿತ್ತಾ ಎಂದು ಅಲ್ಲಿಯ ವೈದ್ಯರೂ ಅರೆ ಕ್ಷಣ ಅಂದುಕೊಂಡರಂತೆ. ಆದರೆ ಆ ಬೆಕ್ಕಿನ ಧಾವಂತ, ಅದರ ಕಣ್ಣಿನಲ್ಲಿ ಇರುವ ನೋವನ್ನು ಅಲ್ಲಿಯ ಮಹಿಳಾ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಅವರಿಗೆ ಅರೆ ಕ್ಷಣದಲ್ಲಿಯೇ ಬೆಕ್ಕು ಮರಿಯ ಸಂಕಟದಲ್ಲಿದೆ ಎಂದು ತಿಳಿದಿದೆ.

ಆ ಕಡೆ, ಈ ಕಡೆ ನೋಡದ ಬೆಕ್ಕು ಅಚ್ಚರಿ ಎಂಬಂತೆ ಸೀದಾ ಎಮರ್ಜೆನ್ಸಿ ವಾರ್ಡ್​ನತ್ತ ಓಡಿದೆ. ಅಷ್ಟೊತ್ತಿಗಾಗಲೇ ಆ ಮಹಿಳಾ ಸಿಬ್ಬಂದಿ ಆಸ್ಪತ್ರೆಯ ವೈದ್ಯರಿಗೆ ವಿಷಯ ತಿಳಿಸಿದ್ದರು. ಆ ಬೆಕ್ಕನ್ನು ನೋಡಿದ ವೈದ್ಯರಿಗೂ ಈ ಅಮ್ಮನ ನೋವು ತಿಳಿಯಲು ಹೆಚ್ಚು ಹೊತ್ತು ಬೇಕಾಗಿಲ್ಲವಂತೆ.

ಆ ಬೆಕ್ಕು ಕೂಡ ವೈದ್ಯರತ್ತ ದನನೀಯ ದೃಷ್ಟಿ ಬೀರಿತು. ನಂತರ ಮರಿಯನ್ನು ಕರೆದುಕೊಂಡು ಹೋದ ವೈದ್ಯರು, ನಂತರ ತಂದು ಬೆಕ್ಕಿನತ್ತ ಬಿಟ್ಟಿದ್ದಾರೆ. ಮರಿಗೆ ಏನಾಗಿತ್ತು, ಅದಕ್ಕೆ ಚಿಕಿತ್ಸೆ ಕೊಟ್ಟರೇ ಇತ್ಯಾದಿಗಳ ಬಗ್ಗೆ ಮಾಹಿತಿ ಇಲ್ಲ.

ಆದರೆ ಈ ಬೆಕ್ಕಿನ ಬಗ್ಗೆ ಮಾತ್ರ ಅಲ್ಲಿಯ ವೈದ್ಯರೊಬ್ಬರು ಫೋಟೋ ಸಹಿತ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ನಾವು ಒಂದು ವಿಶೇಷ ಚಿಕಿತ್ಸೆಯಲ್ಲಿ ತೊಡಗಿದ್ದೆವು. ಅದು ಬೆಕ್ಕಿನ ಮರಿಯದ್ದು. ಅದಕ್ಕಾಗಿ ನಾವು ಇಂದು ಎಮರ್ಜೆನ್ಸಿ ವಾರ್ಡ್​ಗೆ ಹೋಗಿದ್ದೆವು' ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಭಾರಿ ವೈರಲ್​ ಆಗಿದೆ.