Caste Census: ಇಂದು ಜಾತಿಗಣತಿಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ನಡೆಸಿದ ಹೈಕೋರ್ಟ್, ಜಾತಿ ಗಣತಿ ಆಕ್ಷೇಪಿಸಿದ್ದ ಅರ್ಜಿ ವಿಚಾರಣೆಯನ್ನು ನಾಳೆಗೆ (ಸೆ.24) ಮುಂದೂಡಿದೆ.
ಇದನ್ನೂ ಓದಿ: ಚಿಕನ್ ಮಾಡುವಂತೆ ಕೇಳಿಕೊಂಡರೂ ಕೇವಲ ಅನ್ನ-ಚಟ್ನಿ ಕೊಡ್ತಿದ್ದ ಪತ್ನಿ: ಬೇಸತ್ತು ಸಾವಿಗೆ ಶರಣಾದ 25 ವರ್ಷದ ಯುವಕ! Chicken
ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸ್ಥಿತಿ ಸಮೀಕ್ಷೆ (ಜಾತಿ ಗಣತಿ) ಸೆ.22ರಿಂದ ಆರಂಭವಾಗಿದೆ. ಆದರೆ, ಇದನ್ನು ವಿರೋಧಿಸಿ ಪಿಐಎಲ್ ದಾಖಲಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ಪೀಠವು, ವಿಚಾರಣೆಯನ್ನು ಇದೀಗ ಬುಧವಾರಕ್ಕೆ ಮುಂದೂಡಿಕೆ ಮಾಡಿದೆ.
ಅರ್ಜಿದಾರರು ಮತ್ತು ಪ್ರತಿವಾದಿಗಳಿಂದ ಲಿಖಿತ ಸಾರಾಂಶ ಸಲ್ಲಿಸಲಾಯಿತು. ಈಗಷ್ಟೇ ಲಿಖಿತ ವಾದಾಂಶದ ಪ್ರತಿ ನಮಗೆ ನೀಡಿದ್ದಾರೆಂದು ಹಿಂದುಳಿದ ವರ್ಗಗಳ ಆಯೋಗದ ಪರ ವಕೀಲರು ಆಕ್ಷೇಪಿಸಿದರು. ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿ, ಹಿಂದುಳಿದ ವರ್ಗಗಳ ಕಾಯ್ದೆ ಅಡಿಯಲ್ಲಿ ಜಾತಿಗಣತಿ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲ ಜನರ ಸರ್ವೆ ನಡೆಸಲು ಸರ್ಕಾರ ಆದೇಶಿಸಿದೆ. ಡಿಜಿಟಲ್ ಆ್ಯಪ್ ಮೂಲಕವೂ ಸರ್ವೆ ನಡೆಸಲಾಗುತ್ತಿದೆ. ಜಿಪಿಎಸ್, ವಿದ್ಯುತ್ ಮೀಟರ್ ರೀಡರ್ಗಳ ಸಹಕಾರ ಪಡೆಯಲಾಗಿದೆ. ಎಲ್ಲರೂ ಆಧಾರ್, ಮೊಬೈಲ್ ನಂಬರ್ ಕೊಡಬೇಕೆಂದು ಸೂಚಿಸಲಾಯಿತು.
ಇಷ್ಟು ಮಾತ್ರವಲ್ಲದೆ, ಮನೆಯ ಮುಖ್ಯಸ್ಥನ ಸಂಪೂರ್ಣ ವಿವರ ಕೇಳಲಾಗಿದೆ. ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸರ್ವೆ ಅಧಿಕಾರವಿಲ್ಲ. ರಾಷ್ಟ್ರಪತಿಗಳು ಮಾತ್ರ ಹಿಂದುಳಿದ ವರ್ಗಗಳ ಅಧಿಸೂಚನೆ ಹೊರಡಿಸಬಹುದೆಂದು ನಾವದಗಿ ತೀವ್ರವಾಗಿ ಆಕ್ಷೇಪಿಸಿದರು. ಇದೇ ವೇಳೆ ಪೀಠ ಪ್ರತಿಕ್ರಿಯಿಸಿ, ಸಂವಿಧಾನಕ್ಕೆ 105ನೇ ತಿದ್ದುಪಡಿ ಎಂದಿತು. ಹೌದು, ಸಂವಿಧಾನದ ವಿಧಿ 342 A(3) ರಲ್ಲಿ ಅಧಿಕಾರ ನೀಡಲಾಗಿದೆ. ಸಾಮಾಜಿಕ, ಆರ್ಥಿಕ ಹಿಂದುಳಿದವರ ಪಟ್ಟಿ ತಯಾರಿಸಬಹುದು. ಆದರೆ, ಸಂಸತ್ತಿಗೆ ಮಾತ್ರ ಹಿಂದುಳಿದ ವರ್ಗಗಳನ್ನು ಸೇರಿಸಬಹುದು ಎಂದು ವಕೀಲ ಪ್ರಭುಲಿಂಗ್ ನಾವದಗಿ ನ್ಯಾಯಾಲಯಕ್ಕೆ ತಿಳಿಸಿದರು.
ಇಂದು ಅಂತಿಮ ತೀರ್ಪಿನ ವಿಚಾರಣೆಯಲ್ಲ. ಸಂಕ್ಷಿಪ್ತವಾಗಿ ವಾದಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ವಾದ ಮಂಡಿಸಿ, ಸಂವಿಧಾನದ 342 A(3) ಪ್ರಕಾರ ಈ ಕಾಯ್ದೆಯನ್ನು ರೂಪಿಸಲಾಗಿಲ್ಲ. ರಾಜ್ಯದ ಎಲ್ಲ ಜನರ, ಜಾತಿಯ ಸರ್ವೆ ಮಾಡಲಾಗುತ್ತಿದೆ. ಇರುವ, ಇಲ್ಲದಿರುವ ಎಲ್ಲ ಜಾತಿಗಳ ಸರ್ವೆ ಮಾಡುತ್ತಿದ್ದಾರೆ. ಸರ್ಕಾರ ಸರ್ವೆ ಹೆಸರಿನಲ್ಲಿ ಜನಗಣತಿ (ಸೆನ್ಸಸ್) ಮಾಡುತ್ತಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯ ಅಧಿಕಾರವನ್ನು ಚಲಾಯಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಈ ರೀತಿಯ ಜನಗಣತಿ ಮಾಡುವ ಅಧಿಕಾರವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸರ್ಕಾರ ಜಾತಿ ಗಣತಿಗೆ ಆದೇಶಿಸಿದೆ. ಆದರೆ, ಇದು ಸಂವಿಧಾನದ ಆರ್ಟಿಕಲ್ 342A(3) ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ವರದಿ ಪರಿಗಣಿಸದೇ ಹೊಸ ಪ್ರಕ್ರಿಯೆ, ಜಾತಿಗಣತಿಯ ಅಂಕಿ ಅಂಶಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ಆಧಾರ್ಗೆ ಲಿಂಕ್ ಮಾಡುತ್ತಿದ್ದಾರೆ. ಸರ್ಕಾರದ ಈ ಕ್ರಮ ಕಾನೂನುಬಾಹಿರವೆಂದು ವಾದಿಸಲಾಯಿತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಹೈಕೋರ್ಟ್ ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ. ಸದ್ಯಕ್ಕೆ ಸರ್ವೆ ಕಾರ್ಯ ಮುಂದೂಡಲು ಸಾಧ್ಯವೇ? ಎಂದು ಪ್ರಶ್ನಿಸಿತು.
ಈ ವೇಳೆ ಸರ್ಕಾರದ ಪರವಾಗಿ ತಮ್ಮ ವಾದ ಮಂಡನೆ ಮಾಡಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ರೀತಿಯ ಹಳೆಯ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿಲ್ಲ. ಹೀಗಾಗಿ ಈ ಗಣತಿಗೆ ತಡೆ ನೀಡಬಾರದು. ಅಷ್ಟಕ್ಕೂ ಇದು ಜನಗಣತಿಯಲ್ಲ, ಕೇವಲ ಸಮೀಕ್ಷೆ ಮಾಡುತ್ತಿದ್ದೇವೆ. ಆದ್ದರಿಂದ ಸಮೀಕ್ಷೆಗೆ ಮಧ್ಯಂತರ ತಡೆ ನೀಡಬಾರದೆಂದು ಮನವಿ ಮಾಡಿದರು. ಅಲ್ಲದೆ, ಅಂಕಿ-ಅಂಶ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರ ಸಮೀಕ್ಷೆ ಮೂಲಕ ಅಂಕಿ-ಅಂಶವನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ವಾದ ಮುಂದುವರಿಸಿದ ಮನು ಸಿಂಘ್ವಿ, ಬೇಕಾದರೆ, ದಸರಾ ಬಳಿಕ ಅಂತಿಮ ವಿಚಾರಣೆಯನ್ನು ನಡೆಸಬಹುದು. ಆದರೆ, ಸದ್ಯಕ್ಕೆ ಮಧ್ಯಂತರ ತಡೆ ಅವಶ್ಯಕತೆ ಇಲ್ಲ ಎಂದರು. ಈ ವೇಳೆ ನ್ಯಾಯಾಲಯ ಈಗ ಸರ್ವೆಗೆ ಅವಕಾಶ ನೀಡಿದರೆ ಅಂಕಿ-ಅಂಶ ಸಂಗ್ರಹವಾಗುತ್ತದೆ ಮತ್ತು ಒಮ್ಮೆ ಅಂಕಿ ಅಂಶ ಸಂಗ್ರಹವಾದರೆ, ಅದನ್ನು ಮರಳಿಸಲು ಸಾಧ್ಯವಿಲ್ಲ ಹೀಗಾಗಿ, ನಾಳೆ ಮಧ್ಯಾಹ್ನ 2.30ಕ್ಕೆ ಮಧ್ಯಂತರ ತಡೆಯಾಜ್ಞೆ ಬಗ್ಗೆ ವಿಚಾರಣೆ ನಡೆಸುವುದಾಗಿ ನ್ಯಾಯ ಪೀಠ ತಿಳಿಸಿತು.