Sanjay Gaikwad: ಜು.08ರಂದು ಮುಂಬೈನ ಆಕಾಶವಾಣಿ ಶಾಸಕರ ನಿವಾಸದಲ್ಲಿ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ಇದೀಗ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಪೊಲೀಸರು ಈ ವಿಷಯದ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು. ಪ್ರಕರಣದ ಗಂಭೀರತೆಗೆ ಅನುಗುಣವಾಗಿ, ಸಂತ್ರಸ್ತನ ಮೇಲೆ ಎಷ್ಟು ತೀವ್ರವಾಗಿ ಹಲ್ಲೆ ಮಾಡಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಪರಾಧದ ಸ್ವರೂಪವನ್ನು ನಿರ್ಧರಿಸಿ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.
ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕಾಗಿ ಕ್ಯಾಂಟೀನ್ ಗುತ್ತಿಗೆದಾರ ಸೇರಿದಂತೆ ಇತರೆ ಸಿಬ್ಬಂದಿಗಳ ಮೇಲೆ ಶಾಸಕ ಸಂಜಯ್ ಗಾಯಕ್ವಾಡ್ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಎರಡು ದಿನಗಳ ಬಳಿಕ ಪೊಲೀಸರು ಕ್ರಮ ಕೈಗೊಂಡಿರುವುದು ಗಮನಾರ್ಹ. ಕ್ಯಾಂಟೀನ್ನಲ್ಲಿ ನೀಡಿದ ಆಹಾರಗಳ ಪೈಕಿ ದಾಲ್ ತುಂಬಾ ಕಳಪೆ ಗುಣಮಟ್ಟದ್ದಾಗಿತ್ತು ಮತ್ತು ತಿಂದ ಕೆಲ ಸಮಯದ ಬಳಿಕ ತಾನು ಅಸ್ವಸ್ಥಗೊಂಡಿದ್ದಾಗಿ ಗಾಯಕ್ವಾಡ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕ್ವಾರ್ ಅಣೆಕಟ್ಟು ಕಾಮಗಾರಿ ಚುರುಕುಗೊಳಿಸಲು ರೂ.3,119 ಕೋಟಿ ಸಾಲ ಕೇಳಿದ ಭಾರತ; ಪಾಕಿಸ್ತಾನಕ್ಕೆ ಕಳವಳ| chenab
ಬುಲ್ಡಾನಾದಿಂದ ಎರಡು ಅವಧಿಗೆ ಶಾಸಕರಾಗಿರುವ ಅವರು, ತಮಗೆ ಬಡಿಸಲಾದ ಬೇಳೆ ಮತ್ತು ಅನ್ನವು ಕಳಪೆ ಗುಣಮಟ್ಟದ್ದಾಗಿದ್ದರಿಂದ ಕೋಪಗೊಂಡು ಕ್ಯಾಂಟೀನ್‌ಗೆ ನುಗ್ಗಿ ಸಿಬ್ಬಂದಿಯನ್ನು ಥಳಿಸಿದ್ದಾರೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಗಾಯಕ್ವಾಡ್ ಕ್ಯಾಂಟೀನ್ ಸಿಬ್ಬಂದಿಯನ್ನು ನಿಂದಿಸುತ್ತಿರುವುದು, ಬಿಲ್ ಪಾವತಿಸಲು ನಿರಾಕರಿಸುತ್ತಿರುವುದು ಮತ್ತು ಬಿಲ್ಲಿಂಗ್ ಕೌಂಟರ್‌ನಲ್ಲಿ ಕುಳಿತಿದ್ದ ಕೆಲಸಗಾರನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ.
ಘಟನೆಯ ಬೆನ್ನಲ್ಲೇ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಜುಲೈ 9ರಂದು ಕ್ಯಾಂಟೀನ್ ನಿರ್ವಹಿಸುವ ಗುತ್ತಿಗೆದಾರ ಅಜಂತಾ ಕ್ಯಾಟರರ್ಸ್‌ನ ಪರವಾನಿಗೆಯನ್ನು ಅಮಾನತುಗೊಳಿಸಿದೆ.(ಏಜೆನ್ಸೀಸ್).