ನ್ಯೂಸ್

ಮಿಸ್ಟರ್​ ಇಂಡಿಯ ಆತ್ಮಹತ್ಯೆ ಯತ್ನ: ನಟ ಸಾಹಿಲ್​ ಖಾನ್​ಗೆ ಸಂಕಷ್ಟ

ಮುಂಬೈ: ಮಿಸ್ಟರ್​ ಇಂಡಿಯ ಪ್ರಶಸ್ತಿ ವಿಜೇತ ಬಾಡಿ ಬಿಲ್ಡರ್​ ಮನೋಜ್​ ಪಾಟೀಲ್​ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ನಟ ಸಾಹಿಲ್​ ಖಾನ್​ ಮತ್ತು ಇತರ ಮೂವರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಟೀಲ್​ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಇದಾಗಿದೆ.

ಪಾಟೀಲ್​ ಅವರು ಗುರುವಾರ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಸಾವಿಗೆ ನಟ ಸಾಹಿಲ್‌ ಖಾನ್‌ ಅವರೇ ಕಾರಣ ಎಂದು ಪಾಟೀಲ್​ ನೋಟ್‌ನಲ್ಲಿ ಬರೆದಿಟ್ಟಿದ್ದರು. ಅವರ ಮ್ಯಾನೇಜರ್​ ಕೂಡ ನಟ ಸಾಹಿಲ್​ ಖಾನ್​ರಿಂದ ಕಿರುಕುಳ ಅನುಭವಿಸಿ, ಪಾಟೀಲ್​ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಮಿಸ್ಟರ್ ಇಂಡಿಯಾ ಆದ ನಂತರ ಮನೋಜ್​ ಪಾಟೀಲ್​ ಮಿಸ್ಟರ್​ ಒಲಂಪಿಯಾದಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದು, ಸಾಹಿಲ್ ಖಾನ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದ್ದಾರೆ. ಆದ್ದರಿಂದ ಸ್ಪರ್ಧೆಯಲ್ಲಿ ತಾವು ಭಾಗವಹಿಸದಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಪಾಟೀಲ್ ಈ ಮುನ್ನ ಆರೋಪಿಸಿದ್ದರು ಎನ್ನಲಾಗಿದೆ. (ಏಜೆನ್ಸೀಸ್)