ನವದೆಹಲಿ: ದೇಶಾದ್ಯಂತ ಎಲ್ಲ ಬ್ಯಾಂಕುಗಳ ಎಲ್ಲ ಎಟಿಎಂಗಳಲ್ಲೂ ಶೀಘ್ರ ಕಾರ್ಡ್ ಲೆಸ್ ಕ್ಯಾಶ್ ಸೇವೆ ಲಭ್ಯವಾಗಲಿದೆ. ಈ ಪ್ರಸ್ತಾವನೆಯನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಪ್ರಕಟಿಸಿದರು. ಇದರೊಂದಿಗೆ ಕಾರ್ಡ್ ಬಳಕೆ ಸಂಪೂರ್ಣ ಕೊನೆಗೊಳ್ಳಲಿದೆ. ಈವರೆಗೆ ಕೆಲವು ಬ್ಯಾಂಕುಗಳು ಮಾತ್ರ ಈ ಸೇವೆಯನ್ನು ಎಟಿಎಂ ಮೂಲಕ ನೀಡುತ್ತಿದ್ದವು. ಇನ್ಮುಂದೆ ಇದು ಎಲ್ಲ ಬ್ಯಾಂಕುಗಳ, ಎಲ್ಲ ಎಟಿಎಂಗಳಲ್ಲೂ ಲಭ್ಯವಾಗಲಿದೆ. ಈ ಹಣಕಾಸು ಸೇವೆಯು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತವಾದುದು ಎಂದು ದಾಸ್ ವಿವರಿಸಿದರು.
ವಹಿವಾಟು ಸರಳಗೊಳಿಸುವುದು, ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಮುಂತಾದ ವಂಚನೆ ತಡೆಯಲು ಕಾರ್ಡ್ ಬಳಸಿ ಮಾಡುವ ಎಲ್ಲ ಹಣಕಾಸಿನ ವಹಿವಾಟನ್ನು ಯುಪಿಐ ಆಧಾರಿತ ಸೌಲಭ್ಯದ ಮೂಲಕ ನೆರವೇರಿಸಬಹುದು. ಇಂತಹ ಸೇವೆ ಬಳಸುವಾಗ ಯುಪಿಐ ಕಸ್ಟಮರ್ ವೆರಿಫಿಕೇಶನ್ ಮಾಡುತ್ತದೆ ಎಂದು ದಾಸ್ ಹೇಳಿದರು.
ಏನಿದು ಸೌಲಭ್ಯ?: ಕಾರ್ಡ್ಲೆಸ್ ಕ್ಯಾಶ್ ಎಂಬ ಹೆಸರೇ ಸೂಚಿಸುವಂತೆ ಎಟಿಎಂ ಕೇಂದ್ರಗಳಲ್ಲಿ ಹಣ ನಗದೀಕರಿಸುವುದಕ್ಕೆ ಗ್ರಾಹಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಬೇಕಾಗಿಲ್ಲ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಕೆಲವು ಬ್ಯಾಂಕ್ಗಳು ಕಾಂಟ್ಯಾಕ್ಟ್ ಲೆಸ್ ಸೇವೆ ಒದಗಿಸುವುದಕ್ಕಾಗಿ ಈ ವಿಧಾನ ಬಳಕೆಗೆ ತಂದಿದ್ದವು. ಎಸ್ಬಿಐ, ಐಸಿಐಸಿಐ ಬ್ಯಾಂಕ್, ಏಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮುಂತಾದ ಬ್ಯಾಂಕುಗಳ ಎಟಿಎಂಗಳಲ್ಲಿ ಈ ಸೇವೆಗೆ ಅವಕಾಶವಿತ್ತು.
ಬಳಕೆ ಹೇಗೆ?: ಕಾರ್ಡ್ಲೆಸ್ ಕ್ಯಾಶ್ ಸೇವೆ ಬಳಸಲು ಆಯಾ ಬ್ಯಾಂಕಿನ ಮೊಬೈಲ್ ಆಪ್ ಅನ್ನು ಗ್ರಾಹಕರು ಹೊಂದಿರಬೇಕು. ಅದರ ಮೂಲಕ ವಿತ್ಡ್ರಾ ಕ್ಯಾಶ್ ಸೌಲಭ್ಯ ಬಳಸಬೇಕು. ಇದರಲ್ಲಿ ಮೊಬೈಲ್ ಪಿನ್ ಬಳಸಿಕೊಂಡು 10,000 ರೂ.ನಿಂದ 25,000 ರೂ.ತನಕ ಹಣ ನಗದೀಕರಿಸಬಹುದು.