ರೇಷನ್​ ಪಡೆಯಲು ಕಾರ್ಡ್​ದಾರರು ಪರದಾಟ 
ನ್ಯೂಸ್

ಪಡಿತರಕ್ಕಾಗಿ ಕಾರ್ಡ್‌ದಾರರಿಗೆ ಇನ್ನಿಲ್ಲದ ಸಂಕಷ್ಟ : ರೇಷನ್ ವಿತರಣೆಗೆ ಮತ್ತೆ ವಕ್ಕರಿಸಿದ ಸರ್ವರ್ ಭೂತ - Server issues

ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆಯಿಂದ ಕಾರ್ಡ್‌ದಾರರಿಂದ ಬೆರಳಚ್ಚು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಈವರೆಗೆ ಶೇ.50 ರೇಷನ್ ಹಂಚಿಕೆ ಮಾಡಲಾಗಿದ್ದು, ಮುಂದಿನ 5 ದಿನಗಳಲ್ಲಿ ಇನ್ನೂ ಶೇ.50 ಪಡಿತರ ನೀಡಬೇಕಿದೆ.

ಬೆಂಗಳೂರು: (Server issues) ನಾಲ್ಕೈದು ತಿಂಗಳ ಹಿಂದೆ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಹರಸಾಹಸಪಟ್ಟಿದ್ದ ಕೋಟ್ಯಂತರ ಲಾನುಭವಿಗಳಿಗೆ, ಇದೀಗ ರೇಷನ್ ಪಡೆಯಲು ಮತ್ತೆ ಸಂಕಷ್ಟ ಎದುರಾಗಿದೆ.

ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆಯಿಂದ ಕಾರ್ಡ್‌ದಾರರಿಂದ ಬೆರಳಚ್ಚು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಈವರೆಗೆ ಶೇ.50 ರೇಷನ್ ಹಂಚಿಕೆ ಮಾಡಲಾಗಿದ್ದು, ಮುಂದಿನ 5 ದಿನಗಳಲ್ಲಿ ಇನ್ನೂ ಶೇ.50 ಪಡಿತರ ನೀಡಬೇಕಿದೆ.

ಕೇಂದ್ರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಮತ್ತು ರಾಜ್ಯದ ‘ಅನ್ನಭಾಗ್ಯ’ಯೋಜನೆಯಡಿ 10,47,080 ಅಂತ್ಯೋದಯ ಮತ್ತು 1,14,38,886 ಬಿಪಿಎಲ್ ಚೀಟಿಗಳಿಗೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ 4.70 ಲಕ್ಷ ಮೆಟ್ರಿಕ್ ಟನ್ ಪಡಿತರ ವಿತರಿಸಲಾಗುತ್ತಿದೆ.

ಎರಡು ಯೋಜನೆಗಳಡಿ ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ ಅಕ್ಕಿ, ರಾಗಿ ಸೇರಿ 10 ಕೆಜಿ ಆಹಾರ ಧಾನ್ಯ ವಿತರಿಸಬೇಕು. ಪ್ರತಿ ಅಂತ್ಯೋದಯ ಕಾರ್ಡ್‌ಗೆ 35 ಕೆಜಿ ನೀಡಬೇಕು. ಆದರೆ, ಪಡಿತರ ಪಡೆಯಲು ಬೆರಳಚ್ಚು ( ಬಯೋಮೆಟ್ರಿಕ್ ) ನೀಡಬೇಕಿದೆ. ತಮ್ಮ ಪಾಲಿನ ಅಕ್ಕಿ ಪಡೆಯಲು ಬಿಸಿಲು ಲೆಕ್ಕಿಸದೆ ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ನೂರಾರು ಕಾರ್ಡ್‌ದಾರರು ಖಾಲಿ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ನ್ಯಾಯಬೆಲೆ ಅಂಗಡಿಗಳ ಮುಂಭಾಗ ಬಯೋಮೆಟ್ರಿಕ್ ನೀಡಲು ಸರದಿ ಸಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಹಿರಿಯ ನಾಗರಿಕರು, ಅಂಗವಿಕಲರು ಸಹ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ವೇಳೆ ಸರ್ವರ್ ಸಮಸ್ಯೆಯಿಂದ ಕೇವಲ 7-8 ಕಾರ್ಡ್‌ದಾರರ ಬಯೋ ಮಾತ್ರ ತೆಗೆದುಕೊಳ್ಳಲಾಗುತ್ತಿದ್ದು, ಉಳಿದವರು ಮನೆಗೆ ವಾಪಸ್ ತೆರಳುತ್ತಿದ್ದಾರೆ. ದೈನಂದಿನ ಕೆಲಸ ಬಿಟ್ಟು ಕಾರ್ಡ್‌ದಾರರು ಅಂಗಡಿಗಳ ಮುಂದೆ ದಿನಗಟ್ಟಲೆ ಕಾಯುವಂತಾಗಿದ್ದು, ಕಾರ್ಡ್‌ದಾರರು ಇನ್ನಿಲ್ಲದ ಸಂಕಷ್ಟ ಪಡುವಂತಾಗಿದೆ.

ಆಹಾರ ಇಲಾಖೆ ಹೆಣಗಾಟ:

ಪಡಿತರ ವಿತರಣೆಗೆ ನಿರಂತರವಾಗಿ ಸರ್ವರ್ ಭೂತ ವಗ್ಗರಿಸುತ್ತಿದೆ. ‘ಸರ್ವರ್ ಡೌನ್’ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಹೆಣಗಾಡುವಂತಾಗಿದೆ. ಸರ್ವರ್ ಸಮಸ್ಯೆಗೆ ಮುಕ್ತಿ ಕೊಡಬೇಕಾದ ಜವಾಬ್ದಾರಿ ಇಲಾಖೆಗೆ ಇಲ್ಲವಾಗಿದೆ.ಇದರಿಂದ ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಡ್‌ದಾರರು ಹೋಗಿ ಬರುವಂತಾಗಿದೆ. ಜನಪ್ರಿಯ ಯೋಜನೆಗೆ ನೂರೆಂಟು ತೊಂದರೆಯಾಗುತ್ತಿದೆ. ಸರ್ವರ್ ಮೇಲ್ವಿಚಾರಣೆ ನಡೆಸುವವರು ಇಲಾಖೆಯಿಂದ ಸಮರ್ಪಕವಾಗಿ ಹಣ ಪಾವತಿಸದಿದ್ದರೆ ಬೇಕಂತಲ್ಲೇ ಕೆಲವೊಮ್ಮೆ ಸರ್ವರ್ ಡೌನ್ ಮಾಡುತ್ತಿರುವ ಬಗ್ಗೆಯೂ ಗಂಭೀರ ಆರೋಪವಿದೆ. ಗ್ರಾಮೀಣ ಭಾಗ ಸೇರಿ ನಗರ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ ಜಾಸ್ತಿಯಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ‘ಸರ್ವರ್ ಸಮಸ್ಯೆ’ ಎಂದು ಉತ್ತರ ಕೊಟ್ಟು ರೋಸಿ ಹೋಗಿದ್ದಾರೆ.

* ಪಡಿತರ ವಿತರಣೆಗೆ ಮತ್ತೆ ವಗ್ಗರಿಸಿದ ಸರ್ವರ್ ಭೂತ

* ರೇಷನ್ ಪಡೆಯಲು ಕಾರ್ಡ್‌ದಾರರ ಪರದಾಟ

* ದಿನಗಟ್ಟಲೆ ಸರದಿ ಸಾಲಿನಲ್ಲಿ ಕಾಯುವ ಶಿಕ್ಷೆ

* ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾರ್ಡ್‌ದಾರರಿಗೆ ಕಾಯುವ ಶಿಕ್ಷೆ

* ಪ್ರತಿನಿತ್ಯ ಕೇವಲ 7-8 ಕಾರ್ಡ್‌ದಾರರ ಬಯೋ ಮಾತ್ರ ತೆಗೆದುಕೊಳ್ಳಲು ಸಾಧ್ಯ

* ಪ್ರತಿ ತಿಂಗಳು ಶೇ.100 ಪಡಿತರ ಎತ್ತುವಳಿ ಕಷ್ಟ

* ಗ್ರಾಮೀಣ ಪ್ರದೇಶಗಳಲ್ಲಿ ಬಿಗಾಡಯಿಸಿರುವ ಸರ್ವರ್ ಸಮಸ್ಯೆ

* ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥ ವಿತರಣೆ

* ಪ್ರತಿ ತಿಂಗಳು 5ನೇ ತಾರೀಕುನಿಂದ ಕಾರ್ಡ್‌ದಾರರಿಗೆ ಪಡಿತರ ಹಂಚಿಕೆ ಶುರು

* ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ, ಕಾರ್ಡ್‌ದಾರರ ಬೆರಳಚ್ಚು ಪಡೆದು ಅಕ್ಕಿ ನೀಡಬೇಕಿದೆ

* 20,168 ನ್ಯಾಯಬೆಲೆ ಅಂಗಡಿಗಳಿಂದ ಕಾರ್ಡ್‌ದಾರರಿಗೆ ಪಡಿತರ ವಿತರಣೆ

ಆಹಾರ ಇಲಾಖೆ ಸರ್ವರ್ ಅನ್ನು ಸರ್ಕಾರದ 21 ಇಲಾಖೆಗಳು ಅವಲಂಬಿತವಾಗಿವೆ. ಹೀಗಾಗಿ, ಪಡಿತರ ವಿತರಣೆಗೆ ಪದೇಪದೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆ ಬಗೆಹರಿಯುವರೆಗೆ ಮೊಬೈಲ್ ಒಟಿಪಿ ಇಲ್ಲವೆ ಚೆಕ್‌ಲೀಸ್ಟ್ ಮೂಲಕ ವಿತರಣೆಗೆ ಅವಕಾಶ ನೀಡಬೇಕು. ಆಹಾರ ಇಲಾಖೆ ಆಯುಕ್ತರು ಸೇರಿ ಸಂಬಂಧಪಟ್ಟವರನ್ನು ಭೇಟಿ ಮಾಡಿ ಸರ್ವರ್ ಸಮಸ್ಯೆ ಗಮನಕ್ಕೆ ತಂದರೂ ಬಗೆಹರಿದಿಲ್ಲ. ಪಡಿತರ ವಿತರಣೆಗೆ ಪ್ರತ್ಯೇಕ ಸರ್ವರ್ ಕೇಂದ್ರ ಸ್ಥಾಪಿಸಬೇಕು. ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂಭಾಗ ನಿಲ್ಲುವ ಕಾರ್ಡ್‌ದಾರರು ನಮಗೆ ಶಾಪ ಹಾಕುತ್ತಿದ್ದಾರೆ.

ಟಿ.ಕೃಷ್ಣಪ್ಪ. ಅಧ್ಯಕ್ಷ.ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ.