ನ್ಯೂಸ್

ನದಿಗೆ ಜಿಗಿದ ಕಾರು; 6 ಆದಿ ಕೈಲಾಸ ಯಾತ್ರಿಕರು ಮೃತ್ಯು!

ಉತ್ತರಾಖಂಡ: ಆದಿ ಕೈಲಾಸನ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಕಾರೊಂದು ಲಖನ್‌ಪುರ ಬಳಿ ಕಾಳಿ ನದಿಗೆ ಬಿದ್ದ ಪರಿಣಾಮ ಆರು ಜನರು ಸಾವನ್ನಪ್ಪಿದ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಮಂಗಳವಾರ (ಅ.24) ವರದಿಯಾಗಿದೆ.

ಘಟನೆ ಬಗ್ಗೆ ಪಿಥೋರಗಢ್ ಪೊಲೀಸ್ ಅಧೀಕ್ಷಕ (SP) ಲೋಕೇಶ್ವರ್ ಸಿಂಗ್ ಮಾತನಾಡಿ, "ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಸಂತ್ರಸ್ತರು ಆದಿ ಕೈಲಾಸನ ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ" ಎಂದು ಹೇಳಿದರು.

ಆದಿ ಕೈಲಾಸನ ದರ್ಶನಕ್ಕೆ ತೆರಳಿದ್ದ 6 ಯಾತ್ರಿಕರ ಪೈಕಿ ಇಬ್ಬರು ಬೆಂಗಳೂರಿನವರು, ಇಬ್ಬರು ತೆಲಂಗಾಣದವರು ಮತ್ತು ಇಬ್ಬರು ಉತ್ತರಾಖಂಡದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸ್ಪಂದಿಸಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.

"ಘಟನೆ ಸಂಜೆ ವೇಳೆ ಸಂಭವಿಸಿದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಬುಧವಾರ (ಅ.25) ಬೆಳಗ್ಗೆಯಿಂದ ಶೋಧ ಕಾರ್ಯ ಆರಂಭವಾಗಲಿದೆ" ಎಂದು ಎಸ್ಪಿ ಹೇಳಿದರು,(ಏಜೆನ್ಸೀಸ್).