ಆರ್ಮುಗಂ ರವಿಶಂಕರ್​ ಪುತ್ರ ಈಗ ಹೀರೋ ! ಮಗ ಅದ್ವೈ ಚಿತ್ರಕ್ಕೆ ಅಪ್ಪನೇ ನಿರ್ದೇಶಕ..

Ravishankar (3)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಡಬ್ಬಿಂಗ್ ಕಲಾವಿದರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರವಿಶಂಕರ್, ನಂತರ ನಟನೆ. ನಿರ್ದೇಶನ, ಗಾಯನ ಅಂತ ಬೇರೆ ಬೇರೆ ವಿಭಾಗಗಳಲ್ಲೂ ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ನಾಯಕನಾಗಿದ್ದ ‘ಕೆಂಪೇಗೌಡ’ ಚಿತ್ರದಲ್ಲಿ ‘ಆರ್ಮುಗಂ’ ಪಾತ್ರದ ಮೂಲಕ ಮನೆ ಮಾತಾದ ಅವರು ನಂತರ ಕನ್ನಡದ ಜತೆ ಬೇರೆ ಭಾಷೆಗಳಲ್ಲೂ ಮಿಂಚಿದ್ದಾರೆ. ಇಂತಹ ರವಿಶಂಕರ್ ಇದೀಗ 20 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. 2004ರಲ್ಲಿ ಮಾಲಾಶ್ರೀ ನಟಿಸಿದ್ದ ‘ದುರ್ಗಿ’ ಸಿನಿಮಾ ನಿರ್ದೇಶಿಸಿದ್ದ ಅವರು, ಈಗ ತಮ್ಮದೇ ನಿರ್ದೇಶನದಲ್ಲಿ ಮಗ ಅದ್ವೈನನ್ನು ಚಿತ್ರರಂಗಕ್ಕೆ ಪರಿಚಯಿಸಲು ಹೊರಟಿದ್ದಾರೆ.

ಚಿತ್ರದ ಹೆಸರು ‘ಸುಬ್ರಹ್ಮಣ್ಯ’. ವಿದೇಶದಲ್ಲಿ ವಿದ್ಯಾಭ್ಯಾಸದ ಜತೆಗೆ ನಟನಾ ತರಬೇತಿ ಪಡೆದಿರುವ ಅದ್ವೆ ಇದೀಗ ಹುಟ್ಟೂರಿಗೆ ಮರಳಿದ್ದು, ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಯುಧಪೂಜೆಯ ಸಂಭ್ರಮದಲ್ಲಿ ರವಿಶಂಕರ್, ಮಗನ ಮೊದಲ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ದೇವರ ವಾಹನವಾದ ನವಿಲನ್ನು ತೋರಿಸಲಾಗಿದ್ದು, ನಾಯಕ ಅದ್ವೈ ಒಂದು ಕೈಯಲ್ಲಿ ಜ್ವಾಲೆ ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದಿರುವ ರೀತಿಯಲ್ಲಿ ಚಿತ್ರಸಲಾಗಿದೆ.

ಚಿತ್ರಕ್ಕೆ ತೆಲುಗಿನ ‘ಅರ್ಜುನ್ ರೆಡ್ಡಿ’ ಖ್ಯಾತಿಯ ರಾಜ್ ತೋಟ ಛಾಯಾಗ್ರಹಣ, ‘ಕೆಜಿಎಫ್​’, ‘ಸಲಾರ್’ ಖ್ಯಾತಿಯ ರವಿ ಬಸ್ರೂರ್ ಸಂಗೀತ, ವಿಜಯ್ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ ಇರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿಬರಲಿದ್ದು, ಡಿಸೆಂಬರ್‌ನಿಂದ ರವಿಶಂಕರ್ ಮತ್ತು ತಂಡ ಚಿತ್ರೀಕರಣ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net