ನ್ಯೂಸ್

ದೀದಿ, ನೀವಿಲ್ಲದೆ ಬದುಕಲಾರೆ : ಮಾಜಿ ಟಿಎಂಸಿ ನಾಯಕಿ

ಕೊಲ್ಕತ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚೆ ಬಿಜೆಪಿ ಸೇರಿದ್ದ ಟಿಎಂಸಿಯ ಮಾಜಿ ಶಾಸಕಿ ಸೋನಾಲಿ ಗುಹ ಅವರು ಇದೀಗ ಮತ್ತೆ ಆಡಳಿತಾರೂಢ ಟಿಎಂಸಿ ಸೇರಬಯಸಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕ್ಷಮೆ ಕೋರಿ, ಪಕ್ಷಕ್ಕೆ ವಾಪಸ್​ ಪಡೆಯುವಂತೆ ಪತ್ರ ಬರೆದಿದ್ದಾರೆ.

ಟಿಎಂಸಿಯಿಂದ ನಾಲ್ಕು ಬಾರಿ ಶಾಸಕಿಯಾಗಿದ್ದ ಸೋನಾಲಿ ಗುಹ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಅವರ ನೆರಳೆಂದೇ ಹೇಳಲಾಗುತ್ತಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೀಟು ಕೊಡದ ಬಗ್ಗೆ ಕೋಪಗೊಂಡು ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಟಿಎಂಸಿಗೆ ವಾಪಸಾಗಲು ಬಯಸಿದ್ದು, 'ಬೇರೆ ಪಕ್ಷ ಸೇರುವ ತಪ್ಪು ನಿರ್ಧಾರ ಕೈಗೊಂಡೆ' ಎಂದಿದ್ದಾರೆ. ಬಂಗಾಳಿಯಲ್ಲಿ ದೀದಿಗೆ ಬರೆದಿರುವ ತಮ್ಮ ಪತ್ರವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿರುವ ಆಕೆ, 'ಟಿಎಂಸಿ ತೊರೆದಿದ್ದು ತಾವು ಭಾವುಕರಾಗಿ ಮಾಡಿದ ನಿರ್ಧಾರ' ಎಂದಿದ್ದಾರೆ.

"ಯಾವ ರೀತಿಯಲ್ಲಿ ಮೀನು ನೀರಿನ ಹೊರಗೆ ಜೀವಿಸಲು ಸಾಧ್ಯವಿಲ್ಲವೋ, ಹಾಗೇ ನಾನು ನೀವಿಲ್ಲದೆ ಬದುಕಲಾರೆ, ದೀದಿ. ನನ್ನನ್ನು ಕ್ಷಮಿಸಿ ಬಿಡಿ, ಇಲ್ಲದಿದ್ದರೆ ನಾನು ಬದುಕಲಾರೆ. ದಯವಿಟ್ಟು ನನಗೆ ವಾಪಸ್​ ಬರಲು ಅವಕಾಶ ಕೊಟ್ಟು ಉಳಿದ ಜೀವನವನ್ನು ನಿಮ್ಮ ಮಮತೆಯಲ್ಲಿ ಕಳೆಯಲು ಅವಕಾಶ ಮಾಡಿಕೊಡಿ" ಎಂದು ಭಾವುಕವಾದ ಪತ್ರ ಬರೆದಿದ್ದಾರೆ. ಒಂದು ಕಾಲದಲ್ಲಿ ಬಂಗಾಳ ವಿಧಾನಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಕೂಡ ಆಗಿದ್ದ ಗುಹ, ತಮಗೆ 'ಬಿಜೆಪಿಯಲ್ಲಿ ಬೇಡದವರಂತೆ ಅನುಭವವಾಯಿತು' ಎಂದಿದ್ದಾರೆ. (ಏಜೆನ್ಸೀಸ್)