ಮುಂಬೈ: ಮಹಿಳೆಯಲ್ಲಿ ಕಾಡುವ ಮಾರಕ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ಲಸಿಕೆ ಸಿದ್ಧವಾಗುತ್ತಿದ್ದು, ಮುಂದಿನ ಕೆಲ ತಿಂಗಳಲ್ಲಿ 9-16 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲಾಗು ವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಪ್ರತಾಪ್ರಾವ್ ಜಾಧವ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ಯಾನ್ಸರ್ ವಿರುದ್ಧ ಹೋರಾಡಲು ಮುಂದಾಗಿದ್ದು, 30 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರನ್ನು ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗುವುದು ಮತ್ತು ಕ್ಯಾನ್ಸರ್ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಡೇಕೇರ್ ಕ್ಯಾನ್ಸರ್ ಸೆಂಟರ್ಗಳನ್ನು ತೆರೆಯಲಾಗುವುದು. ಕೇಂದ್ರ ಸರ್ಕಾರ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ತಗ್ಗಿಸಲು ಕಸ್ಟಮ್್ಸ ಡ್ಯೂಟಿಯನ್ನು ಮನ್ನಾ ಮಾಡಿದೆ ಎಂದು ತಿಳಿಸಿದ್ದಾರೆ.
9-16 ವರ್ಷದವರಿಗೆ ಲಸಿಕೆ: ಗರ್ಭಕಂಠ, ಸ್ತನ ಮತ್ತು ಬಾಯಿಯ ಕ್ಯಾನ್ಸರ್ ವಿರುದ್ಧ ಹೋರಾಡಲು ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಲಸಿಕೆ ತಯಾರಿಕೆ ಅಂತಿಮ ಹಂತದಲ್ಲಿದ್ದು, ಈಗಾಗಲೇ ಲಸಿಕೆಯ ನಡೆಯುತ್ತಿದೆ. ಇನ್ನು 5-6 ತಿಂಗಳಲ್ಲಿ ಲಸಿಕೆ ಲಭ್ಯವಾಗಲಿದ್ದು, 9-16 ವರ್ಷ ವಯೋಮಿತಿಯ ಬಾಲಕಿಯರಿಗೆ ಲಸಿಕೆ ನೀಡಲಾಗುವುದು ಎಂದು ಜಾಧವ್ ತಿಳಿಸಿದ್ದಾರೆ. ಗರ್ಭಕಂಠ ಕ್ಯಾನ್ಸರ್ನಿಂದ ಮಹಿಳೆಯರನ್ನು ರಕ್ಷಿಸಲು ಕೇಂದ್ರ ಸರ್ಕಾರ 9ರಿಂದ 16 ವರ್ಷದೊಳಗಿನ ಬಾಲಕಿಯರಿಗೆ ಲಸಿಕೆ ನೀಡಲಿದೆ ಎಂದು 2024ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಈ ಹಿನ್ನೆಲೆ ಕ್ಯಾನ್ಸರ್ ಲಸಿಕೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ಏನಿದು ಕ್ಯಾನ್ಸರ್ ಲಸಿಕೆ?: ಬೇರೆ ರೋಗಗಳ ನಿಯಂತ್ರಣಕ್ಕೆ ಬಳಸುವ ಲಸಿಕೆಯಂತೆಯೇ ಕ್ಯಾನ್ಸರ್ ಲಸಿಕೆ ಕಾರ್ಯನಿರ್ವಹಿಸುತ್ತದೆ. ಈ ಲಸಿಕೆ ದೇಹದಲ್ಲಿ ಕ್ಯಾನ್ಸರ್ ರೋಗಾಣುಗಳ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಲಸಿಕೆ ದೇಹದ ಪ್ರತಿರೋಧ ವ್ಯವಸ್ಥೆಗೆ ಕ್ಯಾನರ್ ರೋಗಾಣುಗಳನ್ನು ಗುರುತಿಸಿ ನಾಶಪಡಿಸುವುದನ್ನು ತರಬೇತುಗೊಳಿಸುತ್ತದೆ. ವೈರಸ್ನಿಂದ ಬರುವ ಕ್ಯಾನ್ಸರ್ಅನ್ನು ತಡೆಗಟ್ಟಲು ಲಸಿಕೆ ಪರಿಣಾಮಕಾರಿ ಮಾಧ್ಯಮವಾಗಿದೆ. ಭವಿಷ್ಯದಲ್ಲಿ ವೈರಸ್ನಿಂದ ಬರುವ ಕ್ಯಾನ್ಸರ್ ಅನ್ನು ನಿಮೂಲನೆ ಮಾಡಲು ಲಸಿಕೆ ನೆರವಾಗುತ್ತದೆ.
ಎಂಟು ಲಕ್ಷ ಜನರ ಸಾವು: 2024ರಲ್ಲಿ ದೇಶದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಕ್ಯಾನ್ಸರ್ನಿಂದಾಗಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರತಿ ದಿನ 2 ಸಾವಿರಕ್ಕೂ ಹೆಚ್ಚು ಜನರು ಮಾರಕ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ. ಯಾವ ಕ್ಯಾನ್ಸರ್ ಹೆಚ್ಚು ಮಾರಕ ಎಂಬ ವಿವರ ಇಲ್ಲಿದೆ.
ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್ಪಿವಿ) ನಿಂದ ಬರುವ ಗರ್ಭಕಂಠದ ಕ್ಯಾನ್ಸರ್ ತಡೆಯಲು ಈಗ ಎಚ್ಪಿವಿ ಲಸಿಕೆ ಲಭ್ಯವಿದೆ. ಇದು ವೈರಸ್ ಸೋಂಕು ಗರ್ಭಕಂಠದಲ್ಲಿ ಕ್ಯಾನ್ಸರ್ ಆಗಿ ಬೆಳವಣಿಗೆ ಹೊಂದುವುದನ್ನು ನಿಯಂತ್ರಿಸುತ್ತದೆ. ಕ್ಯಾನ್ಸರ್ನ ಅಪಾಯವನ್ನು ಶೇ. 99 ಕಡಿಮೆ ಮಾಡುತ್ತದೆ. 9ರಿಂದ 16 ವರ್ಷ ವಯಸ್ಸಿನ ಹುಡುಗಿಯರಿಗೆ ಈ ಲಸಿಕೆ ನೀಡಿದಲ್ಲಿ ಗರ್ಭಕಂಠದ ಕ್ಯಾನ್ಸರ್ ಸೇರಿ ಎಚ್ಪಿವಿ ವೈರಸ್ನಿಂದ ಉಂಟಾಗುವ ಇತರೆ ಜನನಾಂಗದ ಸಮಸ್ಯೆಗಳನ್ನು ತಡೆಗಟ್ಟಬಹುದು. ಎಚ್ಪಿವಿ ವೈರಸ್ ಲೈಂಗಿಕವಾಗಿ ಹರಡುವ ವೈರಸ್ ಆಗಿದ್ದು, ಪುರುಷರಿಂದ ಮಹಿಳೆಯರಿಗೆ ಹರಡುತ್ತದೆ. ಹಾಗಾಗಿ ಲೈಂಗಿಕ ಸಂಪರ್ಕ ಬೆಳೆಸುವ ಮೊದಲೇ ಹೆಣ್ಣು ಮಕ್ಕಳಿಗೆ ಈ ಲಸಿಕೆ ನೀಡಿದಲ್ಲಿ ಪರಿಣಾಮಕಾರಿ. ವೈದ್ಯರ ಸಲಹೆ ಪಡೆದು 45 ವರ್ಷದವರೆಗಿನವರು ಈ ಲಸಿಕೆ ಪಡೆಯಬಹುದಾಗಿದೆ.
| ಪ್ರೊ. ಡಾ. ಸುರೇಶ್ ಬಾಬು ಮುಖ್ಯಸ್ಥರು, ಮೆಡಿಕಲ್ ಆಂಕಾಲಜಿ ವಿಭಾಗ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಕ್ಯಾನ್ಸರ್ ಲಸಿಕೆ ನೀಡುವ ಸಂಬಂಧ ಬಹಳಷ್ಟು ಸಂಶೋಧನೆಗಳು ನಡೆಯುತ್ತಿದೆ. ಗರ್ಭಕಂಠದ ಕ್ಯಾನ್ಸರ್ಗೆ ಈಗಾಗಲೇ ಎಚ್ಪಿವಿ ಲಸಿಕೆ ಲಭ್ಯವಿದ್ದು, ಖಾಸಗಿಯಲ್ಲಿ ನೀಡಲಾಗುತ್ತಿದೆ. ಅದನ್ನು ಸರ್ಕಾರದಿಂದ 9 -15 ವರ್ಷದ ಹೆಣ್ಣುಮಕ್ಕಳಿಗೆ ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಿತ್ತು. ಆದರೆ ಇದನ್ನು ಬೃಹತ್ ಸಂಖ್ಯೆಯಲ್ಲಿ ನೀಡಬೇಕಾಗಿರುವುದರಿಂದ ಲಸಿಕೆ ತಯಾರಿಕೆ ಕಾರ್ಯ ನಡೆಯುತ್ತಿದ್ದು, ಅದರ ಕುರಿತು ಕೇಂದ್ರ ಸಚಿವರು ಮಾಹಿತಿ ನೀಡಿರಬಹುದು. ಸದ್ಯಕ್ಕೆ ಹೊಸದಾಗಿ ಕ್ಯಾನ್ಸರ್ ಲಸಿಕೆ ಸಂಶೋಧನೆ ಪೂರ್ಣಗೊಂಡ ಮಾಹಿತಿ ಇಲ್ಲ.
| ಡಾ. ಸಿ. ರಾಮಚಂದ್ರ ಕ್ಯಾನ್ಸರ್ ತಜ್ಞ