ಒಟ್ಟಾವಾ: ಕೆನಡಾದಲ್ಲಿ ಖಲಿಸ್ತಾನ್ ಸಂಬಂಧಿತ ಬೆದರಿಕೆ ಭಾರತದ ಜವಾಬ್ದಾರಿಯಲ್ಲ. ಬದಲಿಗೆ ಒಟ್ಟಾಗಿ ನಿಭಾಯಿಸಬೇಕಾದ ದೇಶೀಯ ಸಮಸ್ಯೆಯಾಗಿದೆ ಎಂದು ಕೆನಡಾಕ್ಕೆ ಭಾರತದ ಹೊಸ ಹೈಕಮಿಷನರ್ ದಿನೇಶ್ ಪಟ್ನಾಯಕ್(Dinesh Patnaik) ತಿಳಿಸಿದ್ದಾರೆ.
ಈ ಬಗ್ಗೆ ಸಿಟಿವಿಯ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಪಟ್ನಾಯಕ್, ಕೆನಡಿಯನ್ನರು ಈ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಮತ್ತು ದೇಶವು ಇದನ್ನು ತನ್ನದೇ ಆದ ಕಾನೂನು ಮತ್ತು ಸುವ್ಯವಸ್ಥೆಯ ಸವಾಲಾಗಿ ಪರಿಗಣಿಸಬೇಕು ಎಂದು ಒತ್ತಿ ಹೇಳಿದ್ದಾರೆ.
ಈ ಪರಿಸ್ಥಿತಿಯನ್ನು ಕೆನಡಾ ಭಾರತದ ಸಮಸ್ಯೆಯಾಗಿ ನೋಡಲು ಸಾಧ್ಯವಿಲ್ಲ. ಅಲ್ಲದೆ, ಇದು ಕೆನಡಾದ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಸೃಷ್ಟಿಸುತ್ತಿರುವ ಕೆನಡಿಯನ್ನರು ಇದ್ದಾರೆ ಎಂದು ಪಟ್ನಾಯಕ್ ತಿಳಿಸಿದ್ದಾರೆ. ವೈಯಕ್ತಿಕ ಭದ್ರತಾ ಪರಿಸ್ಥಿತಿಯ ಬಗ್ಗೆಯೂ ರಾಯಭಾರಿ ಕಳವಳ ವ್ಯಕ್ತಪಡಿಸಿದ್ದು, ಉಗ್ರಗಾಮಿಗಳ ಬೆದರಿಕೆಯಿಂದಾಗಿ ಇವರನ್ನು ರಕ್ಷಣೆಯಲ್ಲಿ ಇರಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೆ, ಇಲ್ಲಿ ಒಬ್ಬ ಹೈಕಮಿಷನರ್ ರಕ್ಷಣೆಯಲ್ಲಿರುವುದು ನನಗೆ ವಿಚಿತ್ರವೆನಿಸುತ್ತದೆ. ನಾನು ರಕ್ಷಣೆಯಲ್ಲಿದ್ದೇನೆ. ಇಂತಹ ದೇಶದಲ್ಲಿ ನಾನು ರಕ್ಷಣೆಯಲ್ಲಿರಬಾರದು" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಆರು ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿ ಕೊನೆ ಕ್ಷಣದಲ್ಲಿ ಹೊರಗುಳಿದ ಜೆಎಂಎಂ | JMM
ಮುಂದುವರೆದು ಮಾತನಾಡಿದ ಪಟ್ನಾಯಕ್, ಭಾರತ ಮತ್ತು ಕೆನಡಾ ಪ್ರಸ್ತುತ ಭದ್ರತಾ ಸಹಕಾರದ ಕುರಿತು ವ್ಯಾಪಕ ಮಾತುಕತೆಗಳಲ್ಲಿ ತೊಡಗಿವೆ. ಇದರಲ್ಲಿ ಭಾರತದಲ್ಲಿ ಕೆನಡಿಯನ್ನರ ಸುರಕ್ಷತೆ ಮತ್ತು ಎರಡೂ ದೇಶಗಳಲ್ಲಿ ಸಕ್ರಿಯವಾಗಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಂತಹ ಕ್ರಿಮಿನಲ್ ಗುಂಪುಗಳ ಕಾರ್ಯಾಚರಣೆಗಳು ಸೇರಿವೆ.
ಭದ್ರತಾ ಸಂಸ್ಥೆಗಳು ಪರಸ್ಪರ ಮಾತನಾಡುತ್ತಿವೆ. ಆರ್‌ಸಿಎಂಪಿ ಮತ್ತು ಎನ್‌ಐಎ ನಡುವೆ ಮಾತುಕತೆ ನಡೆಯುತ್ತಿದೆ. ನಮ್ಮ ಎರಡೂ ಎನ್‌ಎಸ್‌ಎಗಳು ಭೇಟಿಯಾಗಿವೆ. ಸಂಬಂಧವನ್ನು ಪುನರ್ನಿರ್ಮಿಸುವ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಪಟ್ನಾಯಕ್ ಹೇಳಿದ್ದಾರೆ.
ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದಕ್ಕಾಗಿ ಕೆನಡಾದ ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಪಟ್ನಾಯಕ್ ಶ್ಲಾಘಿಸಿದ್ದಾರೆ.ಎರೆಡು ದೇಶಗಳ ಸಂಬಂಧಗಳಲ್ಲಿ ಸುಧಾರಣೆ ಅನಿವಾರ್ಯವಾಗಿದ್ದರೂ, ಕಾರ್ನಿ ನಾಯಕತ್ವವು ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡಿದೆ ಎಂದು ದಿನೇಶ್ ಪಟ್ನಾಯಕ್ ತಿಳಿಸಿದ್ದಾರೆ.
ಇದನ್ನೂ ಓದಿ: Naxal terrorism | ಭಾರತವು ನಕ್ಸಲ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಅಂಚಿನಲ್ಲಿದೆ: ಪ್ರಧಾನಿ ಮೋದಿ
ಇದೇ ಸಮಯದಲ್ಲಿ, ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊರ ಹಿಂದಿನ ಹೇಳಿಕೆಗಳನ್ನು ಪಟ್ನಾಯಕ್ ತಿರಸ್ಕರಿಸಿದರು.ಅವರ ಆರೋಪಗಳನ್ನು ಅಸಂಬದ್ಧವಾಗಿದ್ದು, ಯಾವುದೇ ಗಣನೀಯ ಪುರಾವೆಗಳನ್ನು ಒದಗಿಸಲಾಗಿಲ್ಲ ಎಂದು ಕಿಡಿಕಾರಿದ್ದಾರೆ.
ನಿಜ್ಜರ್ ವಿಷಯದಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದು, ಎರಡೂ ದೇಶಗಳು ರಾಜತಾಂತ್ರಿಕರನ್ನು ಹೊರಹಾಕಿ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸಿವೆ. ಅದರೆ, ಕಾರ್ನಿ ಪ್ರಧಾನಿ ನರೇಂದ್ರ ಮೋದಿಯವರನ್ನು G7 ಶೃಂಗಸಭೆಗೆ ಆಹ್ವಾನಿಸಿದ ನಂತರ ಸಂಬಂಧಗಳು ಸುಧಾರಿಸಲು ಪ್ರಾರಂಭಿಸಿದವು. ಅಂದಿನಿಂದ ಸಚಿವರ ಸಭೆಗಳು ಪುನರಾರಂಭಗೊಂಡಿವೆ ಮತ್ತು ಎರಡೂ ದೇಶಗಳು ಇತ್ತೀಚೆಗೆ ಹೆಚ್ಚಿನ ಸಹಕಾರವನ್ನು ಬೆಂಬಲಿಸುವ ಜಂಟಿ ಹೇಳಿಕೆಯನ್ನು ನೀಡಿವೆ. (ಏಜೆನ್ಸೀಸ್)