ನ್ಯೂಸ್

ಜೀನ್ಸ್​ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ... Jeans

Jeans : ಜೀನ್ಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾದ ಉಡುಗೆಯಾಗಿದೆ. ಪ್ರತಿಯೊಬ್ಬರ ಬಳಿಯೂ ಕನಿಷ್ಠ ಹತ್ತು ಬಗೆಯ ಜೀನ್ಸ್ ಇದ್ದೇ ಇರುತ್ತದೆ. ಜೀನ್ಸ್​ ಹಾಕಿದ್ರೆ ಅದರ ಲುಕ್ಕೇ ಬೇರೆ ಎಂದು ಹೇಳುತ್ತಾರೆ. ಅಲ್ಲದೆ, ಕೊಳೆಯು ಸಹ ಅಷ್ಟಾಗಿ ಕಾಣುವುದಿಲ್ಲ ಮತ್ತು ಬೆಲೆ ಕೂಡ ಕಡಿಮೆ ಹಾಗೂ ಬಾಳಿಕೆ ಕೂಡ ಬರುತ್ತದೆ. ಹೀಗಾಗಿ ಬಹುತೇಕರು ಜೀನ್ಸ್​ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಅನೇಕರಿಗೆ ಜೀನ್ಸ್ ಅನ್ನು ಹೇಗೆ ನಿರ್ವಹಿಸಬೇಕು ಎಂಬುದು ತಿಳಿದಿಲ್ಲ. ಸಾಮಾನ್ಯ ಬಟ್ಟೆಯಂತೆಯೇ ಜೀನ್ಸ್ ಅನ್ನು ತೊಳೆದು ಐರನ್​ ಮಾಡಲಾಗುತ್ತದೆ.

ಜೀನ್ಸ್ ಅನ್ನು ಐರನ್​ ಮಾಡಬಹುದೇ ಅಥವಾ ಇಲ್ಲವೇ? ಎಂಬ ಅನುಮಾನ ಅನೇಕರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ. ಜೀನ್ಸ್​ ಅನ್ನು ಐರನ್​ ಮಾಡಬಹುದು. ಸುಕ್ಕುಗಳನ್ನು ಹೋಗಲಾಡಿಸಿ, ಹೆಚ್ಚು ನಯಗೊಳಿಸಿದ ನೋಟವನ್ನು ನೀಡಲು ಜೀನ್ಸ್ ಅನ್ನು ಐರನ್​ ಮಾಡಬಹುದು. ಆದರೆ, ಐರನ್​ ಮಾಡುವಾಗ ಕೆಲವು ಸಲಹೆಗಳನ್ನು ಅನುಸರಿಸಬೇಕು. ಅವುಗಳೆಂದರೆ, ಇಸ್ತ್ರಿ ಮಾಡುವ ಮುನ್ನ ಕೇರ್ ಲೇಬಲ್ ಅನ್ನು ಪರಿಶೀಲಿಸಿ ಅಥವಾ ಬಟ್ಟೆಯ ಸಣ್ಣ ಪ್ರದೇಶವನ್ನು ಪರೀಕ್ಷಿಸಿ ಅದು ಶಾಖಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಿಕೊಳ್ಳಬೇಕು. ಐರನ್​ ಮಾಡುವ ಮುನ್ನ ಸರಿಯಾದ ಶಾಖಕ್ಕೆ ಹೊಂದಿಸಿಕೊಳ್ಳಬೇಕು.

ಇನ್ನು ಜೀನ್ಸ್ ಅನ್ನು ನಿಯಮಿತವಾಗಿ ತೊಳೆಯುವುದರಿಂದ ಅವುಗಳ ಹೊಳಪು ಕಡಿಮೆಯಾಗುತ್ತದೆ. ಇದಲ್ಲದೆ, ಅದು ತನ್ನ ಬಾಳಿಕೆ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಶೀಘ್ರದಲ್ಲೇ ಹರಿದು ಹೋಗುತ್ತದೆ. ಕನಿಷ್ಠ 5 ಅಥವಾ 6 ಬಾರಿ ತೊಟ್ಟ ಬಳಿಕವೇ ಜೀನ್ಸ್ ಅನ್ನು ತೊಳೆಯಬೇಕು. ಜೀನ್ಸ್ ಕೊಳಕು ಅನಿಸಿದರೆ, ಫ್ಯಾಬ್ರಿಕ್ ಸ್ಪ್ರೇ ಬಳಸಿ. ಆದರೆ, ಜೀನ್ಸ್​ ಅನ್ನು ಯಾವುದೇ ಕಾರಣಕ್ಕೂ ನಿಯಮಿತವಾಗಿ ತೊಳೆಯಬೇಡಿ.

ಕೆಲವರಿಗೆ ಬಿಸಿನೀರಿನಲ್ಲಿ ಬಟ್ಟೆ ಒಗೆಯುವ ಅಭ್ಯಾಸವೂ ಇರುತ್ತದೆ. ಆದಾಗ್ಯೂ, ಜೀನ್ಸ್​ ವಿಚಾರದಲ್ಲಿ ಈ ತಪ್ಪನ್ನು ಮಾಡಬೇಡಿ. ಜೀನ್ಸ್ ಅನ್ನು ಯಾವಾಗಲೂ ತಂಪಾದ ಅಥವಾ ಸಾಮಾನ್ಯ ನೀರಿನಲ್ಲಿ ಮಾತ್ರ ತೊಳೆಯಿರಿ. ಹೀಗಾಗಿ ಅದರ ಸ್ಥಿತಿಸ್ಥಾಪಕತ್ವ ಒಂದೇ ಆಗಿರುತ್ತದೆ. ಆದರೆ, ಬಿಸಿ ನೀರಿನಲ್ಲಿ ತೊಳೆಯಬೇಡಿ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಡಿ. ಇದರಿಂದ ಜೀನ್ಸ್​ ಬಣ್ಣವು ಮಾಸುತ್ತದೆ.

ಜೀನ್ಸ್ ಧರಿಸುವುದು ಮಾತ್ರವಲ್ಲ, ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯಬೇಕು. ಹೀಗಾಗಿ ಈ ಮೇಲಿನ ಸಲಹೆಗಳನ್ನು ಅನುಸರಿಸಿ. ಹಾಗೆಯೇ ಜೀನ್ಸ್ ಕೊಳ್ಳುವಾಗ ದುಬಾರಿ ಬೆಲೆಯ ಜೀನ್ಸ್ ಖರೀದಿಸಬೇಕು. 400 ರಿಂದ 500 ರೂ. ಬೆಲೆಯ ಜೀನ್ಸ್ ಕೊಂಡರೆ ಬೇಗ ಹಾಳಾಗುತ್ತದೆ. ಅಲ್ಲದೆ, ಲುಕ್​ ನೀಡುವುದಿಲ್ಲ. ಒಮ್ಮೆ ಹೆಚ್ಚಿನ ಬೆಲೆಯ ಜೀನ್ಸ್ ಖರೀದಿಸಿದರೆ ಹೆಚ್ಚು ಕಾಲ ಸುಲಭವಾಗಿ ಬಳಸಬಹುದು. (ಏಜೆನ್ಸೀಸ್​)