|ವಿಜಯವಾಣಿ ಸುದ್ದಿಜಾಲ ನವದೆಹಲಿ
ಮುಂಬರುವ ಲೋಕಸಭೆ ಚುನಾವಣೆ ಹಾಗೂ ವರ್ಷಾಂತ್ಯದ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿರುವ ಮಧ್ಯೆ ಕೇಂದ್ರ ಸರ್ಕಾರ ಸಂಪುಟ ಪುನರ್ರಚನೆ ನಡೆಸುವ ಲೆಕ್ಕಾಚಾರದಲ್ಲಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವ ಚಿಂತನೆಯಲ್ಲಿದೆ. ಅದೇ ರೀತಿ, ರಾಜ್ಯಸಭೆಯಲ್ಲಿರುವ ಪ್ರಮುಖ ಸದಸ್ಯರನ್ನು ಲೋಕಸಭಾ ಚುನಾವಣಾ ಕಣಕ್ಕಳಿಸಲಿದೆ ಎಂದೂ ಹೇಳಲಾಗಿದೆ.
ಸಂಪುಟ ಪುನರ್ರಚನೆ ಚರ್ಚೆ ನಡುವೆಯೇ, ಕೆಲ ಕೇಂದ್ರ ಸಚಿವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆಡೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಿರಣ್ ರಿಜಿಜು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಪರಿಸರ ಸಚಿವ ಭೂಪೇಂದ್ರ ಯಾದವ್, ರಾಜ್ಯಖಾತೆ ಆರೋಗ್ಯ ಸಚಿವ ಎಸ್ಪಿ ಬಘೇಲ್, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸೇರಿ ಹಲವರು ಒಬ್ಬೊಬ್ಬರಾಗಿ ನಡ್ಡಾರೊಂದಿಗೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತುಕತೆ ನಡೆಸಿ ಬಂದಿದ್ದಾರೆ. ಕೆಲ ದಿನಗಳ ಹಿಂದೆ ನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರನ್ನು ಬದಲಿಸಿರುವ ಬಿಜೆಪಿ ವರಿಷ್ಠರು, ಸಂಘಟನೆಯಲ್ಲೂ ಹಲವು ಬದಲಾವಣೆ ತರುವ ಆಲೋಚನೆಯಲ್ಲಿದ್ದಾರೆ.
ಎನ್ಡಿಎ ಸಭೆ: ಲೋಕಸಭೆ ಚುನಾವಣೆ ಮುನ್ನ ತನ್ನ ಮಿತ್ರರನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಜು.18ರಂದು ಎನ್ಡಿಎ ಮೈತ್ರಿಕೂಟದ ಸಭೆ ಏರ್ಪಡಿಸಿದೆ. ದೆಹಲಿಯ ಅಶೋಕ ಹೊಟೇಲ್ನಲ್ಲಿ ಸಭೆ ನಡೆಯಲಿದ್ದು, ಹಳೆಯ ಮಿತ್ರರಾದ ಪಂಜಾಬ್ನ ಶಿರೋಮಣಿ ಅಕಾಲಿದಳ, ಆಂಧ್ರಪ್ರದೇಶ ಟಿಡಿಪಿ, ಬಿಹಾರದ ಲೋಕಜನಶಕ್ತಿ ಪಾರ್ಟಿ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಈ ಪಕ್ಷಗಳು ಅಧಿಕೃತವಾಗಿ ಎನ್ಡಿಎ ಮೈತ್ರಿಕೂಟಕ್ಕೆ ಮರುಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನೆರೆ ರಾಷ್ಟ್ರಗಳೊಂದಿಗೆ ಸಂಬಂಧ ವಿಸ್ತರಣೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ಬಳಿಕ ಶಾಂಘೖ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆ ಮತ್ತು ಜಿ-20ಯಂತಹ ಜಾಗತಿಕ ರಾಜತಾಂತ್ರಿಕ ಸಭೆಗಳ ನಡುವೆ ಬಿಜೆಪಿ ಪಕ್ಷ ಜಗತ್ತಿನಾದ್ಯಂತ ಇರುವ ರಾಜಕೀಯ ಪಕ್ಷಗಳೊಂದಿಗೆ ತನ್ನ ಒಡನಾಟ ವೃದ್ಧಿಸಲು ಯತ್ನಿಸುತ್ತಿದೆ.
ಬುಧವಾರದಂದು ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪಿಯನ್ ಯೂನಿಯನ್ ಮತ್ತು ಕೆರಿಬಿಯನ್ ರಾಷ್ಟ್ರಗಳ ಭಾರತೀಯ ರಾಯಭಾರಿಗಳು ದೆಹಲಿಯಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಈ ರಾಜತಾಂತ್ರಿಕ ಮುಖಂಡರು, ಕಾಂಗ್ರೆಸ್ಗಿಂತ ಬಿಜೆಪಿ ಹೇಗೆ ಭಿನ್ನ? ಬಿಜೆಪಿ ಮತ್ತೆ ಮತ್ತೆ ಚುನಾವಣೆ ಹೇಗೆ ಗೆಲ್ಲುತ್ತಿದೆ? ಯುವಕರನ್ನು ತೊಡಗಿಸಿಕೊಳ್ಳಲು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮವನ್ನು ಪಕ್ಷ ಹೇಗೆ ಬಳಸುತ್ತಿದೆ? ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಹೇಗೆ ಎದುರಿಸುತ್ತದೆ ಎಂಬೆಲ್ಲ ಪ್ರಶ್ನೆಗಳನ್ನು ನಡ್ಡಾ ಮುಂದಿಟ್ಟರು ಎಂದು ತಿಳಿದುಬಂದಿದೆ.
1951ರಿಂದ ಪಕ್ಷದ ಇತಿಹಾಸ, ಬೆಳವಣಿಗೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳನ್ನು ನಡ್ಡಾ ವಿವರಿಸಿದ್ದಾರೆ. ಮುಖ್ಯವಾಗಿ ತನ್ನ ನೆರೆಹೊರೆ ದೇಶಗಳೊಂದಿಗೆ ಭಾರತದ ಕುರಿತ ಸ್ಪಷ್ಟ ರಾಜಕೀಯ ನಿರೂಪಣೆಯನ್ನು ಹಂಚಿಕೊಳ್ಳುವುದು ಬಿಜೆಪಿಯ ಉದ್ದೇಶ. ಪಕ್ಷದ ಬಗ್ಗೆ ತಪ್ಪು ಮಾಹಿತಿಗಳನ್ನು ರವಾನೆಯಾಗದಂತೆ ನೋಡಿಕೊಳ್ಳಲು ಈ ಯತ್ನ ಎಂದು ಪಕ್ಷದ ಪದಾಧಿಕಾರಿಗಳು ಹೇಳಿದ್ದಾರೆ. ಮುಂಬರುವ ವಾರಗಳಲ್ಲಿ ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್ ಮತ್ತು ನೇಪಾಳದ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ ಕೇಂದ್ರ) ನಿಯೋಗವನ್ನೂ ಬಿಜೆಪಿ ನಾಯಕರು ಭೇಟಿ ಮಾಡಲಿದ್ದಾರೆ.
ರಾಘವೇಂದ್ರಗೆ ಸಚಿವ ಸ್ಥಾನ?
ಕರ್ನಾಟಕದಿಂದ 25 ಸ್ಥಾನಗಳನ್ನು ಗೆದ್ದುಕೊಂಡರೂ ಪ್ರಸ್ತುತ ಸಂಸದರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಮತ್ತು ನಾರಾಯಣ ಸ್ವಾಮಿ, ರಾಜ್ಯಸಭಾ ಸದಸ್ಯರಾದ ನಿರ್ಮಲಾ ಸೀತಾರಾಮನ್ ಹಾಗೂ ರಾಜೀವ ಚಂದ್ರಶೇಖರ್ ಕೂಡ ಮಂತ್ರಿಯಾಗಿದ್ದಾರೆ. ಆದರೆ, ಮುಂದಿನ ಚುನಾವಣೆ ಮುನ್ನ ಮತ್ತೆ ಕೆಲ ಲೋಕಸಭಾ ಸದಸ್ಯರಿಗೆ ಅವಕಾಶ ನೀಡಬೇಕು ಎಂಬ ಆಶಯ ರಾಜ್ಯ ಬಿಜೆಪಿ ಘಟಕದ್ದು. ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ವರಿಷ್ಠರು ಕೆಲವು ಹಾಲಿ ಕೇಂದ್ರ ಸಚಿವರನ್ನು ಕೈಬಿಡುತ್ತಾರೋ ಅಥವಾ ಸಂಖ್ಯೆ ವೃದ್ಧಿಸುತ್ತಾರೋ ಎಂಬ ಬಗ್ಗೆ ಖಚಿತತೆ ಇಲ್ಲ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಗಳು ಹರಿದಾಡುತ್ತಿದ್ದರೂ ವರಿಷ್ಠರ ಲೆಕ್ಕಾಚಾರ ಗುಟ್ಟಾಗಿದೆ. ಒಂದು ವೇಳೆ ರಾಘವೇಂದ್ರಗೆ ಮಂತ್ರಿಸ್ಥಾನದ ಅದೃಷ್ಟ ಒಲಿದಲ್ಲಿ ಶಾಸಕ ವಿಜಯೇಂದ್ರಗೆ ಸಂಘಟನೆಯಲ್ಲಿ ಬಡ್ತಿ ಅನುಮಾನ ಎನ್ನಲಾಗುತ್ತಿದೆ. ಹಾಗಂತ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬಲ್ಲ ಸಂಭವನೀಯರ ಪಟ್ಟಿಯಲ್ಲಿ ಬಿ.ವೈ. ವಿಜಯೇಂದ್ರ ಹೆಸರಿರುವುದೂ ಸುಳ್ಳಲ್ಲ.